ಹಜ್ ಯಾತ್ರಿಕರಿಗೆ ಸಮರ್ಪಕ ಸವಲತ್ತು ನೀಡುವಂತೆ ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಆಗ್ರಹ
PC: PTI
ಮಂಗಳೂರು : ಕಳೆದ ವರ್ಷ ಕರ್ನಾಟಕದಿಂದ ಪವಿತ್ರ ಹಜ್ ಯಾತ್ರೆಗೆ ಹಜ್ (ಕಮಿಟಿ) ನಿರ್ವಹಣಾ ಸಮಿತಿ ಮೂಲಕ ತೆರಳಿದ ಅನೇಕ ಮಂದಿ ವಿವಿಧ ರೀತಿಯ ಸಂಕಷ್ಟವನ್ನು ಎದುರಿಸಿದ್ದಾರೆ. ಈ ಬಾರಿ ಹಜ್ ಯಾತ್ರಿಕರಿಗೆ ಸಮರ್ಪಕ ಸವಲತ್ತು ನೀಡುವಂತೆ ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಆಗ್ರಹಿಸಿದೆ.
ಕಳೆದ ವರ್ಷ ಹಜ್ ಯಾತ್ರಿಕರು ಕುಡಿಯುವ ನೀರಿನ ಸಮಸ್ಯೆ, ಸಂಚಾರಕ್ಕೆ ವಾಹನ ವ್ಯವಸ್ಥೆ ಇಲ್ಲದಿರುವಿಕೆ, ಶೌಚಾಲಯದ ಕೊರತೆ ಮತ್ತಿತರ ಸಮಸ್ಯೆಗಳನ್ನು ಎದುರಿಸಿದ್ದರು. ಅದಕ್ಕಿಂತಲೂ ಮಿಗಿಲಾಗಿ ತಮ್ಮ ವಾಸ್ತವ್ಯ ಸ್ಥಳಕ್ಕೆ ಕಾಲ್ನಡಿಗೆಯಿಂದ ಸಾಗಬೇಕಾಗಿತ್ತು. ತಾಪಮಾನ ಏರಿಕೆಯಿಂದಾಗಿ ಹಲವಾರು ಯಾತ್ರಿಗಳು ಸಮಸ್ಯೆ ಎದುರಿಸಿದ್ದರು. ಕೆಲವರು ಪ್ರಾಣ ಕಳೆದುಕೊಂಡಿದ್ದರು.
ಈ ವರ್ಷ ಹಜ್ ಯಾತ್ರೆಗೆ ತೆರಳುವ ಎಲ್ಲಾ ಯಾತ್ರಿಕರಿಗೆ ಪೂರ್ಣ ಪ್ರಮಾಣದ ಸವಲತ್ತುಗಳನ್ನು ಒದಗಿಸುವುದರೊಂದಿಗೆ ಕಳೆದ ವರ್ಷದ ದುರಂತ ಮರುಕಳಿಸದಂತೆ ನಿಗಾ ವಹಿಸಬೇಕೆಂದು ದ.ಕ. ಜಿಲ್ಲಾ ಮುಸ್ಲಿಂಲೀಗ್ ಉಪಾಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ರಾಜ್ಯ ಹಜ್ ನಿರ್ವಹಣಾ ಸಮಿತಿ ಹಾಗೂ ರಾಜ್ಯ ವಕ್ಫ್ ಸಚಿವ ಹಾಗೂ ವಿಧನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಲ್ಲಿ ಆಗ್ರಹಿಸಿರುವುದಾಗಿ ಪ್ರಕಟನೆ ತಿಳಿಸಿದೆ.