×
Ad

ದ.ಕ.: ಆರು ಕೆಎಸ್ಸಾರ್ಟಿಸಿ ಬಸ್ ಗಳ ಮೇಲೆ ಕಲ್ಲೆಸೆತ; ಸಂಚಾರ ಸ್ಥಗಿತ

Update: 2025-05-02 11:59 IST

ಮಂಗಳೂರು, ಮೇ 2: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಹಿಂದುತ್ವ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದೆ.

 

ಕೆಎಸ್ಸಾರ್ಟಿಸಿ ಬಸ್ಸುಗಳ ಮೇಲೂ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

 

ಬೆಳಗ್ಗೆ 7:30ರ ಗಂಟೆ ವರೆಗೆ ಬಸ್ ಗಳು ಸಂಚಾರ ನಡೆಸಿವೆ. ಈ ಮಧ್ಯೆ ಆರು ಬಸ್ ಗಳಿಗೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಲಾಗಿದೆ. ಮೈಸೂರು, ಪುತ್ತೂರುಗಳಿಗೆ ಸಂಚರಿಸುವ ಆರು ಬಸ್ ಗಳಿಗೆ ಕಲ್ಲು ತೂರಾಟ ಮಾಡಿ ಗಾಜುಗಳನ್ನು ಒಡೆಯಲಾಗಿದೆ. ಈ ಕಾರಣ ತಾತ್ಕಾಲಿಕವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಬಸ್ ಸಂಚಾರ ಪುನರಾರಂಭಿಸಲಾಗುವುದು. ಪೊಲೀಸರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

 

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ

 

ಕೆಎಸ್ಸಾರ್ಟಿಸಿ ಸೇರಿದಂತೆ ನಗರದ ಖಾಸಗಿ ಬಸ್ಸು ನಿಲ್ದಾಣ, ರೈಲು ನಿಲ್ದಾಣಗಳಲ್ಲೂ ವಿವಿಧ ಕಡೆಗೆ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಪ್ರಯಾಣಿಕರು ಬಸ್ಸಿಗಾಗಿ ತಾಸುಗಟ್ಟಲೆ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ. ಕೆಲವರು ದುಬಾರಿ ಹಣ ಕೊಟ್ಟು ಆಟೋ ರಿಕ್ಷಾ, ಕ್ಯಾಬ್ ಗಳನ್ನು ಬುಕ್ ಮಾಡಿಕೊಂಡು ಸಂಚರಿಸುತ್ತಿದ್ದಾರೆ. ರೈಲು ನಿಲ್ದಾಣಗಳಲ್ಲಿ ಪ್ರೀಪೇಯ್ಡ್ ಆಟೋಗಳಿಗೆ ಜನರು ಕಾಯುವಂತಾಗಿದೆ.

 

‘ನಾವು ಬೆಳಗ್ಗೆ ಮುಲ್ಕಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬಂದಿದ್ದು. ಈ ಪರಿಸ್ಥಿತಿಯ ಅರಿವಿರಲಿಲ್ಲ. ಇಂದು ಆಂತರಿಕ ಪರೀಕ್ಷೆಯೂ ಇತ್ತು. ಇಲ್ಲಿ ಬಂದು ಇಳಿದ ಮೇಲೆ ಕಾಲೇಜಿನ ಮಾಹಿತಿಯನ್ನು ನೋಡಿದ್ದು. ಈಗ ಮನೆಗೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ’ ಎಂದು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿದ್ದಾರೆ.

 

ಕಾರು, ಆಟೋ, ದ್ವಿಚಕ್ರ ವಾಹನಗಳು ನಗರದಲ್ಲಿ ಸಂಚರಿಸುತ್ತಿವೆಯಾದರೂ ವಿರಳವಾಗಿವೆ. ನಗರದ ಕಂಕನಾಡಿ, ಪಂಪ್ ವೆಲ್, ಲಾಲ್ ಬಾಗ್, ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆ, ಸೆಂಟ್ರಲ್ ಮಾರುಕಟ್ಟೆ ಎಲ್ಲಾ ಕಡೆಗಳಲ್ಲಿ ಸಾರ್ವಜನಿಕ ಸಂಚಾರ ವಿರಳವಾಗಿದೆ. ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ.

ಪೊಲೀಸ್ ಸಿಬ್ಬಂದಿಯ ಮಾನವೀಯತೆ

 

 

 

ನಗರದ ಹಂಪನಕಟ್ಟೆಯ ಬಳಿ ಪೊಲೀಸ್ ಮಹಿಳಾ ಸಿಬ್ಬಂದಿಯೊಬ್ಬರು ಮೂವರು ಹೊರ ರಾಜ್ಯದ ವ್ಯಕ್ತಿಗಳಿಗೆ ಉಳ್ಳಾಲಕ್ಕೆ ತೆರಳಲು ಆಟೋ ರಿಕ್ಷಾ ವ್ಯವಸ್ಥೆಗಾಗಿ ಹರಸಾಹಸಪಟ್ಟ ದೃಶ್ಯ ಕಂಡು ಬಂತು. ಖಾಲಿ ಆಟೋದವರನ್ನು ನಿಲ್ಲಿಸಿ, ಇವರನ್ನು ಬಾಡಿಗೆ ಪಡೆದು ಉಳ್ಳಾಲಕ್ಕೆ ತಲುಪಿಸಿ ಎಂದು ಮಹಿಳಾ ಪೊಲೀಸ್ ಸಿಬ್ಬಂದಿ ಮಾನವೀಯತೆ ಪ್ರದರ್ಶಿಸುತ್ತಿದ್ದರೆ, ಆಟೋದವರು ‘ನಮ್ಮನ್ನು ಹೋಗಲು ಬಿಡುತ್ತಿಲ್ಲ ಮೇಡಂ, ಇಲ್ಲಿ ಬಂದಿರುವುದಕ್ಕೆ ಗಲಾಟೆ ಮಾಡುತ್ತಿದ್ದಾರೆ. ಉಳ್ಳಾಲಕ್ಕೆ ಹೋಗುವುದಿಲ್ಲ’ ಎಂದು ಸೀದಾ ತೆರಳುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News