ಸುಳ್ಯ: ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ಕಟ್ಟಡ, ಸಂಸ್ಕರಣಾ ಘಟಕ, ಜೇನು ಚಾಕಲೇಟ್ ಲೋಕಾರ್ಪಣೆ
ಸುಳ್ಯ: ದ.ಕ. ಜಿಲ್ಲೆಯಲ್ಲಿ ಆಹಾರ ಪರೀಕ್ಷೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಫುಡ್ ಟೆಸ್ಟ್ ಲ್ಯಾಬ್ ತೆರೆಯಲು ಪ್ರಯತ್ನ ನಡೆಸಲಾಗುವುದು ಎಂದು ಭಾರತ ಸರಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶುಕ್ರವಾರ ರಾಜ್ಯ ಸರಕಾರದಿಂದ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಸುಳ್ಯದ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕ ಹಾಗೂ ಚಾಕಲೇಟ್ ನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, "ಇವತ್ತು ನಾವೆಲ್ಲರೂ ಕೃಷಿಯನ್ನು ಅಲಂಭಿತರಾಗಿರುವವರು. ಇವತ್ತಿಗೂ ಕೂಡ ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಕೃಷಿ ಕ್ಷೇತ್ರ. ಸುಮಾರು 50 ಕೋಟಿಗೂ ಹೆಚ್ಚು ಮಂದಿಗೆ ಕೃಷಿ ಕ್ಷೇತ್ರ ಉದ್ಯೋಗ ನೀಡುತ್ತಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಕ್ಷೇತ್ರ ದೇಶದ ಸುಮಾರು 24 ಕೋಟಿ ಮಂದಿಗೆ ಉದ್ಯೋಗ ನೀಡುತ್ತಿದೆ ಎಂದರು. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಹಾನಿಕಾರಕವಲ್ಲ. ಅಡಕೆ ಜತೆ ತಾಳೆ ಬೆಳೆಯಂತಹ ಮಿಶ್ರ ಕೃಷಿಯನ್ನು ಬೆಳೆಯಿರಿ. ಜೇನು ಚಾಕಲೇಟ್ ಲೋಕಾರ್ಪಣೆ ಮಾಡಲಾಗಿದ್ದು, ಜೇನು ಸಾಕಾಣಿಕೆದಾರರಿಗೆ ಇದು ಪ್ರಯೋಜನವಾಗಲಿದ್ದು, ಗುಣಮಟ್ಟದ ಜೇನು ನೀಡುವ ಜೊತೆಗೆ ಗುಣಮಟ್ಟದ ಉತ್ಪನ್ನಕ್ಕೆ ಆದ್ಯತೆ ನೀಡಬೇಕು ಎಂದರು.
ಜೇನು ಚಾಕೋಲೆಟ್ ಲೋಕಾರ್ಪಣೆ ಮಾಡಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ, ಸಹಕಾರ ರತ್ನ ಡಾ.ಎಂಎನ್.ರಾಜೇಂದ್ರ ಕುಮಾರ್ ಮಾತನಾಡಿ ಜೇನು ಸಾಕಾಣಿಕೆ ಗ್ರಾಮೀಣ ಭಾಗದ ಜನರಿಗೆ ಉಪ ಕಸುಬು ಆಗಿದೆ. ಜೇನು ಕೃಷಿಗೂ ಸರಕಾರದಿಂದ ಬೆಳೆ ಸಾಲ ನೀಡುವ ಬಗ್ಗೆ ಮಾತುಕತೆ ಆಗಬೇಕು ಎಂದ ಅವರು ಜೇನು ಆದಾಯ ಮಾತ್ರವಲ್ಲದೇ ಔಷಧೀಯ ಗುಣವನ್ನು ಕೂಡ ಹೊಂದಿದೆ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ನಾಮಫಲಕ ಅನಾವರಣ ಮಾಡಿದರು. ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಂದ್ರ ಕೋಲ್ಚಾರ್ ಅಧ್ಯಕ್ಷತೆ ವಹಿಸಿದ್ದರು. ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು, ದ.ಕ.ಜೇನು ವ್ಯವಸಾಯಗಾರರ ಸಹಕಾರ ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಹಾಗೂ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಚಾಕೋಲೇಟ್ ತಯಾರು ಮಾಡಿದ ಬೆಂಗಳೂರಿನ ಪ್ರಶಾಂತ್ ದಂಪತಿ, ಸಹಕರಿಸಿದ ನ.ಪಂ. ಮುಖ್ಯಾಧಿಕಾರಿ, ಸುಧಾಕರ್, ಮೆಸ್ಕಾಂ ಇಂಜಿನಿಯರ್ ಸುಪ್ರಿತ್, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶಪ್ಪ, ಇಂಜಿನಿಯರ್ ಪ್ರಶಾಂತ್, ಜನಾರ್ದನ. ಕೆ. ಸಂಘದ ವ್ಯವಸ್ಥಾಪನಾ ನಿರ್ದೇಶಕ ತಮ್ಮಯ್ಯ. ಪಿ, ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಅವರನ್ನು ಸನ್ಮಾನಿಸಲಾಯಿತು.
ಚಂದ್ರಕೋಲ್ಚಾರ್ ಸ್ವಾಗತಿಸಿ, ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿ. ವಂದಿಸಿದರು. ಲತಾಶ್ರೀ ಸುಪ್ರಿತ್ ಕಾರ್ಯಕ್ರಮ ನಿರೂಪಿಸಿದರು.