ದ.ಕ. ಜಿಲ್ಲೆಯಲ್ಲಿ ಶೇ.95ರಷ್ಟು ಗ್ಯಾರಂಟಿ ಫಲಾನುವಿಭವಿಗಳು: ಭರತ್ ಮುಂಡೋಡಿ
ಸುಳ್ಯ: ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳು ದ.ಕ.ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದ್ದು, ಶೇ.95ರಷ್ಟು ಮಂದಿ ಫಲಾನುಭಗಳಾಗಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸುಳ್ಯ ಗಾಂಧಿನಗರದಲ್ಲಿ ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಜಾಗೃತಿ ಮೂಡಿಸುವ ದ.ಕ. ಜಿಲ್ಲಾ ಪ್ರಚಾರ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ ನೋಂದಣಿ ಕಾರ್ಯಕ್ರಮವು ಜಿಲ್ಲೆಯಲ್ಲಿ ಯೋಜನೆಯ ಆರಂಭದಲ್ಲೇ ಯಶಸ್ವಿಯಾಗಿ ನಡೆದಿದೆ. ಅಲ್ಲದೆ ಎಲ್ಲಾ ಕಡೆ ಸಾರ್ವಜನಿಕರಿಗೆ ಗ್ಯಾರಂಟಿ ಯೋಜನೆ ನೋಂದಣಿಗೆ ಸಹಾಯವಾಗಲು ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಇದರಿಂದ ಜಿಲ್ಲೆಯ ಬಹುತೇಕ ಜನರು ಒಂದಲ್ಲೊಂದು ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.
ಸರಕಾರದ ಯೋಜನೆಯು ಯಾವುದೇ ಮಧ್ಯವರ್ತಿಗಳ ನೆರವಿಲ್ಲದ ಜನರಿಗೆ ನೇರವಾಗಿ ತಲುಪುತ್ತಿರುವ ಒಂದು ದಾಖಲೆಯ ಕಾರ್ಯಕ್ರಮವಾಗಿದೆ. ಈ ಯಶಸ್ಸಿನಿಂದಾಗಿ ಹಲವು ರಾಜ್ಯಗಳು ಕರ್ನಾಟಕದ ಮಾದರಿಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದು ಭರತ್ ಮುಂಡೋಡಿ ತಿಳಿಸಿದರು.
ಗ್ಯಾರಂಟಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಮಾಸಿಕ 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.
ಸುಳ್ಯ ತಹಶೀಲ್ದಾರ್ ಮಂಜುಳಾ ಹಾಗೂ ತಾಪಂ ಇಒ ರಾಜಣ್ಣ , ಕರ್ನಾಟಕ ಅರೆಭಾಷೆ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ರಿಯಾಝ್, ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಸ್ವಾಗತಿಸಿದರು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ವಂದಿಸಿದರು.