×
Ad

ಗುರುಪುರ: ಗದ್ದೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಕ್ಕೊಳಗಾಗಿ ಯುವತಿ ಮೃತ್ಯು

Update: 2024-07-19 10:47 IST

ಗುರುಪುರ, ಜು.19: ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (20) ಮೃತಪಟ್ಟವರು. ಇವರು ಸಿಎ ಅಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಹರೀಶ್ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದನಗಳನ್ನು ಮೇಯಿಸಲು ಮನೆಯಿಂದ ಹೊರಟಿದ್ದರು. ಈ ವೇಳೆ ಅವರೊಂದಿಗೆ ಮನೆಯ ನಾಯಿಯೂ ತೆರಳಿತ್ತು.

ತಂದೆಯೊಂದಿಗೆ ಹೊರಟಿದ್ದ ನಾಯಿಯನ್ನು ಕರೆತರಳೆಂದು ಆಶ್ನಿ ತೆರಳಿದ್ದರು. ನಾಯಿ ನೀರು ತುಂಬಿದ್ದ ಗದ್ದೆಗೆ ಇಳಿದಾಗ ಆಶ್ನಿ ಕೂಡಾ ಗದ್ದೆಗೆ ಕಾಲಿಟ್ಟಿದ್ದಾಳೆ. ಈ ವೇಳೆ ವಿದ್ಯುತ್ ಆಘಾತ ಸಂಭವಿಸಿ ಆಶ್ನಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.

ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯೊಂದು ತುಂಡಾಗಿ ಗದ್ದೆಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ನಿ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು ಎಂದು ತಿಳಿದುಬಂದಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News