ಹರೀಶ್ ಪೂಂಜಗೆ ತಾಕತ್ತಿದ್ದರೆ ನ್ಯಾಯಾಲಯದ ಮುಂದೆ ತನ್ನ ದ್ವೇಷ ಭಾಷಣವನ್ನು ಸಮರ್ಥಿಸಿಕೊಳ್ಳಲಿ: ಮುನೀರ್ ಕಾಟಿಪಳ್ಳ
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಮೈಕ್ ಸಿಕ್ಕಿದಾಗ ದ್ವೇಷ ಭಾಷಣ ಮಾಡಿ ನಂತರ ನ್ಯಾಯಾಲಯದ ಮುಂದೆ ಪ್ರಕರಣ ರದ್ದು ಪಡಿಸುವಂತೆ ವಿನಂತಿಸುತ್ತಾರೆ. ಅವರಿಗೆ ತಾಕತ್ತಿದ್ದರೆ ಇಲ್ಲಿ ಮಾಡಿದ ಭಾಷಣವನ್ನು ನ್ಯಾಯಾಲಯದ ಮುಂದೆಯೂ ಒಪ್ಪಿಕೊಡು ಸಮರ್ಥಿಸಿಕೊಳ್ಳಲಿ. ಮುಸ್ಲಿಮರು ಇಲ್ಲದಿದ್ದರೆ ಬಿಜೆಪಿಯವರಿಗೆ ಪಂಚಾಯತ್ ಸೀಟ್ ಗೆಲ್ಲಲೂ ಅಸಾದ್ಯ. ಅದಕ್ಕಾಗಿ ಅವರು ಸದಾ ಮುಸ್ಲಿಮರ ಬಗ್ಗೆಯೇ ಮಾತನಾಡುತ್ತಾರೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಹೇಳಿದರು
ಅವರು ಸೋಮವಾರ ತೆಕ್ಕಾರು ಧಾರ್ಮಿಕ ಸಭೆಯಲ್ಲಿ ಭಾರತೀಯ ಪ್ರಜೆಗಳನ್ನು ಕೀಳಾಗಿ ಸಂಬೋದಿಸಿ ಭಾರತೀಯರ ಅವಮಾನಿಸಿದ ಶಾಸಕ ಹರೀಶ್ ಪೂಂಜರನ್ನು ಶಾಸಕತ್ವದಿಂದ ತೆಗೆಯಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಜಮಿಯತುಲ್ ಫಲಾಹ್ ಸಭಾ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತಾಡುತ್ತಿದ್ದರು. ತೆಕ್ಕಾರು ಧಾರ್ಮಿಕ ಸಭಯೊಂದರಲ್ಲಿ ಧಾರ್ಮಿಕ ಭಾಷಣ ಮಾಡಬೇಕಾದ ಶಾಸಕರು ಮುಸ್ಲಿಮರ ಜಮೀನಿನಲ್ಲೇ ನಿಂತು ಮುಸ್ಲಿಮರನ್ನೇ ಕೀಳಾಗಿ ಸಂಬೋದಿಸುತ್ತಾ ಮಾತಾಡಿರುವುದು ಅವರ ವ್ಯಕ್ತಿತ್ವ ಏನೆಂಬುದನ್ನು ತೋರಿಸುತ್ತದೆ ಎಂದರು.
ಬೆಳ್ತಂಗಡಿಯ ಕ್ಷೇತ್ರದಲ್ಲಿ ವಸಂತ ಬಂಗೇರರಂತಹ ಅಭಿವೃದ್ದಿಯ ಹರಿಕಾರರು, ಎಳ್ಚಿತ್ತಾಯರಂತಹ ಹೋರಾಟಗಾರರು ಹುಟ್ಟಿ ಬೆಳೆದ ಈ ಬೆಳ್ತಂಗಡಿ ಮಣ್ಣಿಗೆ ಕಳಂಕ ತರುವ ರೀತಿ ಈ ಶಾಸಕರ ವರ್ತನೆ ಖಂಡನೀಯ ಎಂದರು.
ಈ ಸಂದರ್ಭ ಮಾತಾಡಿದ ಸಾಮಾಜಿಕ ಚಿಂತಕ ಹಾಗೂ ಕಾಂಗ್ರೆಸ್ ವಕ್ತಾರರಾದ ಎಂ.ಜಿ.ಹೆಗಡೆ, "ಈ ಬಿಜೆಪಿ, ಆರೆಸ್ಸೆಸ್ ನವರಲ್ಲಿ ಹೆಚ್ಚಿನವರಿಗೆ ಹಿಂದೂ ಧರ್ಮ ಎಂದರೇನೆಂದೇ ಗೊತ್ತಿಲ್ಲ. ಹಿಂದು ಧರ್ಮ ಅಂದರೇನೆಂದು ನಾವು ಅವರಿಗೆ ಮೊದಲು ಪಾಠ ಮಾಡಬೇಕಿದೆ. ಇಲ್ಲವಾದರೆ ಬ್ರಹ್ಮಕಲಶೋತ್ಸವದಲ್ಲಿ ಹೋಗಿ ಏನನ್ನು ಮಾತಾಡಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲದೆ ಹಿಂದು ಧರ್ಮದ ಬಗ್ಗೆ ಮಾತಾಡುವವನೆಂದು ತನ್ನನ್ನು ತಾನೇ ಹೊಗಳಿಕೊಂಡು ನಮ್ಮ ಧರ್ಮದ ಮಾನ ಹರಾಜು ಆಗುವ ರೀತಿ ಮಾತಾಡಿ ಅವಮಾನಿಸುತ್ತಿರುವುದು ಕಾಣುತ್ತೇವೆ" ಎಂದು ಅಸಮಾದಾನ ವ್ಯಕ್ತಪಡಿಸಿದರು.
ಈ ಹರೀಶ್ ಪೂಂಜ, ಕಲ್ಲಡ್ಕ ಪ್ರಭಾಕರ ಭಟ್ ಮೊದಲಾದವರಿಗೆ ಮುಸ್ಲಿರು ಮತ್ತು ಪಾಕಿಸ್ತಾನವೇ ಮೂಲ ಮಂತ್ರವಾಗಿದೆ ಎಂದು ಟೀಕಿಸಿದರು.
ಬಿಜೆಪಿಗೆ ಹಿಂದು ಧರ್ಮದ ಮಾನ ತೆಗೆಯುವ ಕ್ರಿಮಿನಲ್ ವ್ಯಕ್ತಿಗಳಾದ ಪುನೀತ್ ಕೆರೆಹಳ್ಳಿ, ಶಾಸಕರಾದ ಹರೀಶ್ ಪೂಂಜರಂತವರು ಹಿಂದುನಾಯಕರೆಂದಾದರೆ ಹಿಂದು ಧರ್ಮದ ಗೌರವ ಉಳಿದೀತೆ ಎಂಬುದನ್ನು ನಾವು ನಿಜವಾದ ಹಿಂದುಗಳು ಯೋಚಿಸಬೇಕಾದ ಕಾಲ ಬಂದಿದೆ ಎಂದರು.
ಇಂತಹವರನ್ನು ಹಿಂದು ನಾಯಕರೆಂದು ನಾವು ಒಪ್ಪಿಕೊಂಡರೆ ಸ್ವಾಮೀ ವಿವೇಕಾನಂದ, ಮಹಾತ್ಮಗಾಂದಿ, ಪುರಂದರ ದಾಸರು, ನಾರಾಯಣ ಗುರುಗಳು, ಕನಕ ದಾಸರು, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಬೆಳಗಿಸಿದ ನಮ್ಮ ಹಿಂದು ಧರ್ಮದ ಮಾನ ಉಳಿದೀತೆ ಹೇಳಿ. ದೇವಸ್ಥಾನಕ್ಕೆ ಆಗಲಿ, ಕೊರಗಜ್ಜನ ಸ್ಥಾನಕ್ಕೆ ಆಗಲಿ ಯಾವ ಧಾರ್ಮಿಕ ಸ್ಥಳಕ್ಕೆ ಹೋದರೂ ಈ ಬಿಜೆಪಿಗಳು ಮಾತಾಡುವುದು ಬಿಜೆಪಿ ರಾಜಕೀಯವೇ ಹೊರತು ಧಾರ್ಮಿಕ ಭಾಷಣ ಅಲ್ಲ. ನಾವು ನಮ್ಮ ಹಿಂದು ಧರ್ಮದ ಗೌರವ ಉಳಿಸಲು ಮೊದಲು ಪ್ರತಿ ದೇವಸ್ಥಾನ ದ ಧಾರ್ಮಿಕ ಸಭೆಗಳಲ್ಲಿ ಇಂತಹ ಹೊಲಸು ರಾಜಕೀಯ ಮಾತಾಡುವ ವ್ಯಕ್ತಿಗಳ ವಿರುದ್ದ ದ್ವನಿ ಎತ್ತಿ ಖಂಡಿಸಲು ನಮಗೆ ಸಾದ್ಯವಾಗಬೇಕು ಅದುವೇ ಹಿಂದು ಧರ್ಮವನ್ನು ರಕ್ಷಿಸುವ ಮೊದಲ ದಾರಿಯಾಗಿದೆ ಎಂದರು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೈತ ಮುಖಂಡ ಶ್ಯಾಮರಾಜ್ ಪಟ್ರಮೆ ವಂದಿಸಿದರು. ಸಭೆಯ ನೇತೃತ್ವದಲ್ಲಿ ಸಮಾನಮನಸ್ಕ ಸಂಘಟನೆಗಳ ಮುಖಂಡರುಗಳಾದ ಲಕ್ಷ್ಮಣ ಗೌಡ, ಸಮದ್ ತೆಕ್ಕಾರು, ಸದಾಶಿವ ಶೆಟ್ಟಿ, ಜನಾರ್ಧನ ಆಚಾರ್ಯ, ಫಾರೂಕ್, ರಿಯಾಜ್, ಅಬಿಷೇಕ್, ಕಿರಣಪ್ರಭಾ, ಸುಕುಮಾರ್ ದಿಡುಪೆ, ವಿಶ್ವನಾಥ್ ಶಿಬಾಜೆ, ಅಜಿ.ಎಂ. ಜೋಸ್ ವೇಣೂರು, ಜಯಂತ ಪಾದೆಜಾಲು, ಜಯರಾಮ ಮಯ್ಯ, ನೆಬಿಸ, ಲೋಕೇಶ್ ಕುದ್ಯಾಡಿ, ಧನಂಜಯ, ಜಯಶ್ರೀ, ಪುಷ್ಪಾ, ರಾಮಚಂದ್ರ, ಅಶ್ವಿತ, ಸಲಿಮೋನ್, ದಿನೇಶ್ ನಾಯ್ಕ, ಮೊದಲಾದವರು ಇದ್ದರು.