×
Ad

ಹಿಂದಿನ ಆರ್ಥಿಕ ವರ್ಷದಲ್ಲಿ ಭಾರತದ ಅಡಿಕೆ ಆಮದು ಪ್ರಮಾಣ ಏರಿಕೆ

2024-25ರಲ್ಲಿ 1,208.34 ಕೋಟಿ ರೂ. ಮೌಲ್ಯದ 42,236.02 ಟನ್ ಅಡಿಕೆ ಆಮದು

Update: 2025-12-04 23:32 IST

ಮಂಗಳೂರು, ಡಿ.4: ಹಿಂದಿನ ವರ್ಷ (2023-24)ದಲ್ಲಿ ಕುಸಿತ ಕಂಡಿದ್ದ ಭಾರತಕ್ಕೆ ಆಮದು ಆಗಿರುವ ಅಡಿಕೆ ಪ್ರಮಾಣ 2024-25ರಲ್ಲಿ ಏರಿಕೆಯಾಗಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಲೋಕಸಭೆಗೆ ಈ ಬಗ್ಗೆ ನೀಡಿರುವ ಮಾಹಿತಿಯಂತೆ ಕಳೆದ ಹಣಕಾಸು ವರ್ಷದಲ್ಲಿ 42,236.02 ಟನ್ (1,208.34 ಕೋಟಿ ರೂ. ಮೌಲ್ಯ) ಅಡಿಕೆ ಆಮದು ಮಾಡಿಕೊಂಡಿದ್ದು, 2023-24ರಲ್ಲಿ 40,386.48 ಟನ್ (1,225.70 ಕೋಟಿ ರೂ. ಮೌಲ್ಯ) ಆಮದು ಮಾಡಲಾಗಿತ್ತು.

2022-23ರಲ್ಲಿ ಆಮದು ಮಾಡಿಕೊಂಡ ಅಡಿಕೆ 78,233.66 ಟನ್ (2182.33 ಕೋಟಿ ರೂ. ಮೌಲ್ಯ) ಆಗಿತ್ತು.

2024-25ರಲ್ಲಿ ಭಾರತವು ಬಾಂಗ್ಲಾದೇಶದಿಂದ 447.76 ಕೋಟಿ ರೂ. ಮೌಲ್ಯದ 12,155.40 ಟನ್ ಅಡಿಕೆಯನ್ನು ಆಮದು ಮಾಡಿಕೊಂಡಿದ್ದು, ಬಳಿಕ ಇಂಡೋನೇಶ್ಯದಿಂದ 129.35 ಕೋಟಿ ರೂ. ಮೌಲ್ಯದ 11,589.56 ಟನ್, ಶ್ರೀಲಂಕಾದಿಂದ 303.70 ಕೋಟಿ ರೂ. ಮೌಲ್ಯದ 8,353.70 ಟನ್, ಮ್ಯಾನ್ಮಾರ್‌ನಿಂದ 278.24 ಕೋಟಿ ರೂ. ಮೌಲ್ಯದ 7,569.03 ಟನ್ ಮತ್ತು ಭೂತಾನ್‌ನಿಂದ 3.89 ಕೋಟಿ ರೂ. ಮೌಲ್ಯದ 1, 436.47 ಟನ್ ಅಡಿಕೆಯನ್ನು ಆಮದು ಮಾಡಿಕೊಂಡಿದೆ ಎಂದು ಸಚಿವರು ಸಂಸದ ಬಿ.ವೈ.ರಾಘವೇಂದ್ರ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ್ದರು.

ಭಾರತವು ಮಲೇಶ್ಯ, ಒಮಾನ್, ಸಿಂಗಾಪುರ, ಥಾಯ್ಲೆಂಡ್‌ನಿಂದಲೂ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಂದ (ಎಲ್‌ಡಿಸಿ) ಭಾರತ ಅಡಿಕೆ ಆಮದು ಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಭೂತಾನ್, ಮ್ಯಾನ್ಮಾರ್ ಮತ್ತು ಶ್ರೀಲಂಕಾದಿಂದ ದೊಡ್ಡ ಪ್ರಮಾಣದ ಆಮದುಗಳು ಭಾರತದ ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಇದು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಸೇರಿದಂತೆ ಪ್ರಮುಖ ಉತ್ಪಾದಕ ಪ್ರದೇಶಗಳ ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದರು.

ಭಾರತದ ಸುಂಕ ರಹಿತ ಕೋಟಾ ಮುಕ್ತ (ಡಿಎಫ್‌ಕ್ಯುಎಫ್) ಆದ್ಯತೆಯ ವ್ಯಾಪಾರ ಯೋಜನೆ ಅಡಿಯಲ್ಲಿ ಆ ದೇಶಗಳು ಇದೀಗ ಭಾರತೀಯ ರೈತರಿಗೆ ಹಾನಿ ಮಾಡುವ ರೀತಿಯಲ್ಲಿ ಭಾರತಕ್ಕೆ ಅಡಿಕೆ ರಫ್ತು ಮಾಡುತ್ತಿದೆ ಎಂದು ಕ್ಯಾ.ಚೌಟ ಹೇಳಿದ್ದರು. ಎಲ್‌ಡಿಸಿಯ ಮೂಲ ಉದ್ದೇಶ ಆರ್ಥಿಕತೆಯನ್ನು ಬೆಂಬಲಿಸುವುದಾಗಿದೆ. ಆದರೆ ಇದೀಗ ದುರ್ಬಳಕೆ ಆಗುತ್ತಿದೆ ಎಂದು ಹೇಳಿದ್ದರು.

ಕಳಪೆ ಗುಣಮಟ್ಟದ ಅಡಿಕೆಯನ್ನು ಭಾರತೀಯ ಮಾರುಕಟ್ಟೆಗೆ ಕಳುಹಿಸುವುದರಿಂದ ಸ್ಥಳಿಯ ಅಡಿಕೆಯ ಧಾರಣೆ ಅಸ್ಥಿರಗೊಳ್ಳುತ್ತಿದೆ. ಬೆಳೆಗಾರರರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. 2023ರ ಸೆಪ್ಟೆಂಬರ್ ಮತ್ತು 2024ರ ಆಗಸ್ಟ್ ನಡುವೆ ಅಡಿಕೆಗಳ ರಫ್ತಿನಲ್ಲಿ ಶೇ.57 ಪ್ರಮಾಣವನ್ನು ಹೊಂದಿತ್ತು. ಮ್ಯಾನ್ಮಾರ್ ಶೇ.39 ಮತ್ತು ಶ್ರೀಲಂಕಾ ಸುಮಾರು ಶೇ.2 ರಷ್ಟು ಅಡಿಕೆ ರಫ್ತು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News