ಜ.24ರಿಂದ ಫೆ.2ರವರೆಗೆ ಕಾಜೂರು ಉರೂಸ್ ಕಾರ್ಯಕ್ರಮ
ಬೆಳ್ತಂಗಡಿ: ಕಾಜೂರು ದರ್ಗಾ ಶರೀಫ್ ನಲ್ಲಿ ಈ ವರ್ಷದ ಉರೂಸ್ ಕಾರ್ಯಕ್ರಮ ಜ.24ರಿಂದ ಫೆಬ್ರವರಿ 2ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ಜರುಗಲಿವೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಮತ್ತು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸೈಯದ್ ಕಾಜೂರು ತಂಙಳ್ ವಹಿಸಲಿದ್ದಾರೆ.
ಜ.24ರ ಉದ್ಘಾಟನೆಯಂದು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಸೈಯದ್ ಸಾದಾತ್ ತಂಙಳ್ ಮುಖ್ಯ ಭಾಷಣಗೈಯ್ಯಲಿದ್ದಾರೆ. ಸೈಯದ್ ಮಶ್ಹೂದ್ ತಂಙಳ್ ಎಟ್ಟಿಕುಳಂ ಸಹಿತ ವಿವಿಧ ಜಮಾಅತ್ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಅಂದು ಸಂಜೆ 7ಕ್ಕೆ ಕಿಲ್ಲೂರು ಮಸ್ಜಿದ್ ನಿಂದ ವಿಶೇಷ ಸಂದಲ್ ಮೆರವಣಿಗೆ ಆಗಮಿಸಲಿದೆ. ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಧ್ವಜಾರೋಹಣಗೈಯಲಿದ್ದಾರೆ.
ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಸೈಯದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ.
ಜ.30ರಂದು 'ದ್ಸಿಕ್ರ್ ಮಜ್ಲಿಸ್'ಗೆ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವ ವಹಿಸುವರು. ಸರಕಾರದ ವಿಶೇಷ ಅನುದಾನದಿಂದ ನಿರ್ಮಾಣಗೊಂಡಿರುವ ನೂತನ 'ಮುಸಾಫಿರ್ ಖಾನಾ' ಕಟ್ಟಡದ ಉದ್ಘಾಟನೆ ಇದೇ ವೇಳೆ ನಡೆಯಲಿದೆ. ರಾಜ್ಯ ವಸತಿ, ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವ ಬಿ.ಝೆಡ್ ಝಮೀರ್ ಅಹ್ಮದ್ ಖಾನ್ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್ ಶಿವರಾಂ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಮೊದಲಾದ ಗಣ್ಯರಲ್ಲದೆ ತಾಲೂಕು ಮತ್ತು ಜಿಲ್ಲೆಯ ಅನೇಕ ಸೈಯದ್ ಗಳು, ಉಲಮಾಗಳು, ಸಾಮಾಜಿಕ- ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಫೆಬ್ರವರಿ 2ರಂದು ಉರೂಸ್ ಸಮಾರೋಪ
ಫೆ.2ರಂದು ಬೆಳಗ್ಗೆ ಉರೂಸ್ ಸಮಾರಂಭ ನಡೆಯಲಿದ್ದು, ಸೈಯದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಯೆನೆಪೊಯ ವಿವಿ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿದ್ದಾರೆ.
ವಿವಿಧ ದಿನಗಳಲ್ಲಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸೈಯದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್, ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಡಾ. ದೇವರ್ಸೂಲ ಅಬ್ದುಸ್ಸಲಾಂ ಮುಸ್ಲಿಯಾರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಪ್ರ. ಕಾರ್ಯದರ್ಶಿ ಜೆ.ಎಚ್ ಅಬೂಬಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ದರ್ಗಾ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ಕಿಲ್ಲೂರು ಮಸ್ಜಿದ್ ಕೋಶಾಧಿಕಾರಿ ಅಬೂಬಕರ್ ಮಲ್ಲಿಗೆಮನೆ ಮತ್ತಿತರರು ಉಪಸ್ಥಿತರಿದ್ದರು.