×
Ad

ಕಲ್ಲಡ್ಕ ಪ್ರಭಾಕರ ಭಟ್​ ಪ್ರಕರಣದಲ್ಲಿ ದೂರುದಾರರಿಗೆ ಮೊದಲ ಜಯ; ಬಿಎನ್‌ಎಸ್‌ಎಸ್‌ 338, 339 ಅರ್ಜಿ ಪುರಸ್ಕೃತ

ಜಾಮೀನು ಅರ್ಜಿ ವಿಚಾರಣೆ ಡಿ.5ಕ್ಕೆ ಮುಂದೂಡಿಕೆ

Update: 2025-12-03 15:05 IST

ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು : ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅಡಿ ಅವಕಾಶ ಕೋರಿ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರು ಹಿರಿಯ ವಕೀಲ ಸತೀಶನ್​ ಅವರ ಮೂಲಕ ಸಲ್ಲಿಸಿರುವ ಅರ್ಜಿಯನ್ನು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಪುರಸ್ಕರಿಸಿದೆ.

ಈಶ್ವರಿ ಪದ್ಮುಂಜ ಪರ ವಕೀಲ ಸತೀಶನ್ ಅವರ ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅರ್ಜಿ ಪುರಸ್ಕೃತಗೊಂಡಿರುವುದರಿಂದ ಅವರು ಪ್ರಭಾಕರ ಭಟ್ ಸಲ್ಲಿಸಿರುವ ಜಾಮೀನು ಅರ್ಜಿಗೆ ವಿರುದ್ಧವಾಗಿ ವಾದ ಮಂಡಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇದೀಗ ಕಲ್ಲಡ್ಕ ಭಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 05 ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್​ ಧ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಭಾಕರ ಭಟ್ ಮತ್ತು ದೀಪೋತ್ಸವ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸರು ಬಿಎನ್‌ಎಸ್‌-2023ರ ಸೆಕ್ಷನ್ 79, 196, 299, 302 ಹಾಗೂ 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಆರೋಪಿ ಪ್ರಭಾಕರ ಭಟ್ ಬಂಧನದ ಭೀತಿಯಿಂದ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಅಲ್ಲಿಸಿದ್ದರು. ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್ 29 ಕ್ಕೆ ಮುಂದೂಡಿತ್ತು.

ಅಕ್ಟೋಬರ್ 29 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು, ‘ಆರೋಪಿ ಪ್ರಭಾಕರ ಭಟ್ ಬಂಧನದಿಂದ ರಕ್ಷಣೆ ಪಡೆಯಲು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಪ್ರಭಾಕರ ಭಟ್ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ವೇಳೆ ಅಗತ್ಯವಾದ ವಿಚಾರಗಳನ್ನು ನ್ಯಾಯಾಲಯದಿಂದ ಮರೆಮಾಚಿದ್ದಾರೆ. ಅದರ ಫಲವಾಗಿ ಅವರಿಗೆ ತಾತ್ಕಾಲಿಕ ರಕ್ಷಣೆ ದೊರೆತಿದೆ. . ಹಾಗಾಗಿ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರವಾಗಿ ಆರೋಪಿ ಪ್ರಭಾಕರ ಭಟ್ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಮತ್ತು ವಾದ ಮಾಡಲು ಅವಕಾಶ ಕೊಡಬೇಕು’ ಎಂದು ಅರ್ಜಿಯಲ್ಲಿ ವಾದಿಸಿದ್ದರು. ಹಿರಿಯ ವಕೀಲ ಸತೀಶನ್ ಹಾಕಿರುವ ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅರ್ಜಿಗೆ ತಕರಾರು ಸಲ್ಲಿಸಲು ಅಂದು ಪ್ರಕರಣವನ್ನು ನ.04ಕ್ಕೆಮುಂದೂಡಲಾಗಿತ್ತು. ನ.04 ರಂದು ವಕೀಲ ಸತೀಶನ್ ಹಾಕಿರುವ ಅರ್ಜಿಯ ವಿಚಾರಣೆ ನಡೆಯಲಿಲ್ಲ. ಬದಲಾಗಿ ಅಂದು ಸರ್ಕಾರಿ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದರು. ಅಂದು ವಿಚಾರಣೆಯನ್ನು ನ. 10 ಕ್ಕೆ ಮುಂದೂಡಲಾಗಿತ್ತು. ನ. 10 ರಂದು ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿ ಹತ್ತಾರು ಪುಟಗಳ ಸುಧೀರ್ಘ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಆ ಬಳಿಕ ‘ದೂರುದಾರರಿಗೆ ಯಾವ ಕಾರಣಕ್ಕೆ ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅಡಿ ಅವಕಾಶ ಕೊಡಬೇಕು’ ಎಂಬ ಬಗ್ಗೆ ಸತೀಶನ್ ವಾದ ಮಂಡಿಸಿದರು. ಸತೀಶನ್ ಅವರ ವಾದ ಆಲಿಸಿದ ನ್ಯಾಯಾಲಯವು ಪ್ರಕರಣವನ್ನು ನವೆಂಬರ್ 15 ಕ್ಕೆ ಮುಂದೂಡಿತ್ತು. ವಕೀಲ ಸತೀಶನ್ ಅವರು ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅಡಿ ಅರ್ಜಿಯ ವಾದವನ್ನು ಸುಧೀರ್ಘ ಮಂಡಿಸಿದ್ದರ ಫಲವಾಗಿ ನವೆಂಬರ್ 15, ನವೆಂಬರ್ 17, ನವೆಂಬರ್ 19, ನವೆಂಬರ್ 27 ರಂದು ನ್ಯಾಯಾಲಯವು ಈ ಸಂಬಂಧ ಆದೇಶ ನೀಡಲಾಗಲಿಲ್ಲ. ಈ ನಾಲ್ಕೂ ದಿನಾಂಕಗಳಲ್ಲಿ ‘ಆದೇಶ ಸಿದ್ದಗೊಂಡಿಲ್ಲ’ ಎಂದು ನ್ಯಾಯಾಧೀಶರು ಡೈಲಿ ಆರ್ಡರ್​​ ನಲ್ಲಿ ನಮೂದಿಸಿ ಪ್ರಕರಣವನ್ನು ಡಿಸೆಂಬರ್ 02 ಕ್ಕೆ ಮುಂದೂಡಿದ್ದರು. ಡಿಸೆಂಬರ್ 02 ರಂದು ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರ ವಕೀಲರಾಗಿರುವ ಸತೀಶನ್ ಅವರು ಸಲ್ಲಿಸಿರುವ ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News