ಕೋಟೆಕಾರು | ಸರಕಾರಿ ಜಮೀನು ಅತಿಕ್ರಮಿಸಿ ಟೆಂಟ್ ಹಾಕಲು ಯತ್ನ
ತಂತಿ ತೆರವುಗೊಳಿಸಿ ಎಚ್ಚರಿಕೆ ಫಲಕ ಅಳವಡಿಸಿದ ಅಧಿಕಾರಿಗಳು
ಉಳ್ಳಾಲ, ನ.22: ಕೋಟೆಕಾರು ಪಟ್ಟಣ ಪಂಚಾಯತ್‌ನ ಹನ್ನೆರಡನೇ ವಾರ್ಡ್‌ನ ಬನತ್ತಡಿ ಪ್ರದೇಶದ ಸರಕಾರಿ ಕುಮ್ಕಿ ಜಮೀನಿನಲ್ಲಿ ಶನಿವಾರ ಬೆಳಗ್ಗೆ ಸುಮಾರು ನೂರರಷ್ಟು ಮಂದಿ ಏಕಾಏಕಿ ಟೆಂಟ್ ಹಾಕಿ ಜಮೀನನ್ನು ಅತಿಕ್ರಮಣ ನಡೆಸಲು ಮುಂದಾಗಿದ್ದ ಘಟನೆ ನಡೆದಿದೆ.
ನೂರಾರು ಮಂದಿ ಬನತ್ತಡಿ ಪ್ರದೇಶದ ಸುಮಾರು ಎರಡೂವರೆ ಎಕರೆ ಜಮೀನಿನಲ್ಲಿ ಐದು ಸೆಂಟ್ಸ್‌ನಂತೆ ಜಾಗ ವಿಂಗಡಿಸಿ ತಂತಿಗಳನ್ನು ಕಟ್ಟಿ ಟೆಂಟ್ ಹಾಕಲು ಮುಂದಾಗಿದ್ದರು.
ಈ ಬಗ್ಗೆ ಮಾಹಿತಿ ತಿಳಿದು ಕೋಟೆಕಾರು ಪಪಂ ಗ್ರಾಮ ಕರಣಿಕೆ ನವ್ಯಾ, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕ ಪ್ರಮೋದ್ ಮತ್ತು ಉಳ್ಳಾಲ ಪೊಲೀಸರು ಮಧ್ಯಪ್ರವೇಶಿಸಿದ್ದು, ಸರಕಾರಿ ಜಮೀನನ್ನು ಅತಿಕ್ರಮಣ ಮಾಡಲು ಮುಂದಾಗಿದ್ದವರನ್ನು ತಡೆದಿದ್ದಾರೆ. ಬಳಿಕ ಅವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದಾರೆ.
ಬನತ್ತಡಿ ಎಂಬಲ್ಲಿನ ಸರಕಾರಿ ಕುಮ್ಕಿ ಜಮೀನಿನ 1.25 ಎಕರೆ ಪ್ರದೇಶದಲ್ಲಿ ಕೋಟೆಕಾರು ಪಪಂ ಆಡಳಿತವು ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸುವ ಯೋಜನೆ ರೂಪಿಸಿತ್ತು. ಯೋಜನೆಗಾಗಿ ಸ್ಥಳವನ್ನು ಸರ್ವೇ ಕೂಡ ಮಾಡಲಾಗಿತ್ತು. ಬನತ್ತಡಿ ಪ್ರದೇಶದ ಸರಕಾರಿ ಕುಮ್ಕಿ ಜಮೀನು ಕೋಟೆಕಾರು ಪಟ್ಟಣ ಪಂಚಾಯತ್ ಹೆಸರಿಗೆ ವರ್ಗಾವಣೆಗೊಂಡಿಲ್ಲ. ಈ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸದಂತೆ ಸ್ಥಳೀಯರ ಆಕ್ಷೇಪವೂ ಎದುರಾಗಿತ್ತು. ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸರಕಾರಿ ಜಾಗದಲ್ಲಿ ಟೆಂಟ್ ಹಾಕುವ ಮೂಲಕ ಜನರು ಪ್ರತಿರೋಧ ತೋರಿಸಿದ್ದಾರೆಂದು ಹೇಳಲಾಗುತ್ತಿದೆ. ಕೋಟೆಕಾರು ಪಪಂ ಹಾಗೂ ತಾಲೂಕು ಕಂದಾಯ ಅಧಿಕಾರಿಗಳು ಸರಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ತಂತಿಗಳನ್ನು ತೆರವುಗೊಳಿಸಿ ಎಚ್ಚರಿಕೆಯ ಫಲಕವನ್ನು ಅಳವಡಿಸಿದ್ದಾರೆ.
ಮುಂದಿನ ಸೋಮವಾರ ಈ ವಿಚಾರದ ಕುರಿತಂತೆ ಉಳ್ಳಾಲ ತಾಲೂಕು ಪಂಚಾಯತ್ ಕಚೇರಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ.