×
Ad

ಮಂಗಳೂರು| ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆ ಯಶಸ್ವಿ: ರೈಲ್ವೇ ಘಾಟ್‌ನಲ್ಲಿ ವಿದ್ಯುದ್ದೀಕರಣ ಪೂರ್ಣ

Update: 2025-12-28 22:33 IST

ಮಂಗಳೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗವು ರವಿವಾರ ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಘಾಟ್ ಭಾಗದ ಸಂಪೂರ್ಣ ವಿದ್ಯುದೀಕರಣವನ್ನು ಸಾಧಿಸಿದೆ. ಇದು ಪ್ರದೇಶದ ರೈಲು ಮೂಲಸೌಕರ್ಯವನ್ನು ಬಲಪಡಿಸುವ ಮಹತ್ವದ ಮೈಲಿಗಲ್ಲಾಗಿದೆ.

ಘಾಟ್ ವಿಭಾಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಉದ್ದದ ಮಾರ್ಗವನ್ನು ಒಳಗೊಂಡಿದ್ದು, ಇದು ಭಾರತೀಯ ರೈಲ್ವೆಯ ಅತ್ಯಂತ ತಾಂತ್ರಿಕ ಸವಾಲಿನ ವಿಭಾಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ 1ಕ್ಕೆ 50ರಷ್ಟು ಗ್ರೇಡಿಯಂಟ್, 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ವಕ್ರಗಳು ಇರುವುದರ ಜೊತೆಗೆ, ಭೂಕುಸಿತಗಳಿಗೆ ಹೆಚ್ಚು ಒಳಪಡುವ ಪ್ರದೇಶವಾಗಿರುವುದರಿಂದ, ವಿದ್ಯುದೀಕರಣ ಕಾರ್ಯವು ಅತ್ಯಂತ ಸಂಕೀರ್ಣವಾಗಿತ್ತು.

ಎರಡು ವರ್ಷದಲ್ಲಿ ಪೂರ್ಣ:ವಿದ್ಯುದೀಕರಣ ಕಾರ್ಯವು 2023 ಡಿ.1 ರಂದು ಆರಂಭಗೊಂಡು, 93.55ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಈ ಯೋಜನೆಯಡಿ ಮಾರ್ಗದೊಳಗೆ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಹಾಗೂ ಸಂಪೂರ್ಣ ವಿಭಾಗದಲ್ಲಿ ಮೇಲ್ಮೈ ವಿದ್ಯುದೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮೇಲ್ಮೈ ವಿದ್ಯುತ್ ವ್ಯವಸ್ಥೆಯನ್ನು ಗರಿಷ್ಠ 120 ಕಿಮೀ ಪ್ರತಿ ಗಂಟೆ ವೇಗಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಎರಡು ವಿದ್ಯುತ್ ಕಂಬಗಳ ನಡುವಿನ ಗರಿಷ್ಠ ಅಂತರವನ್ನು 67.5 ಮೀಟರ್‌ಗೆ ಮಿತಿಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವಿಭಾಗದಲ್ಲಿರುವ 57 ಸುರಂಗಗಳಲ್ಲಿ, ಮೇಲ್ಮೈ ವಿದ್ಯುತ್ ಸಾಧನಗಳ ಅಳವಡಿಕೆಗೆ 419 ಮುಖ್ಯ ಬ್ರಾಕೆಟ್‌ಗಳು ಮತ್ತು 419 ಹೆಚ್ಚುವರಿ (ಸ್ಪೇರ್) ಬ್ರಾಕೆಟ್‌ಗಳನ್ನು ಒದಗಿಸಲಾಗಿದೆ. ಸುರಂಗಗಳ ಲೈನ್ಡ್ ಹಾಗೂ ಅನ್ಲೈನ್ಡ್ ಭಾಗಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸವಿಸ್ತಾರವಾದ ಭೌಗೋಳಿಕ ಸಮೀಕ್ಷೆಗಳನ್ನು ನಡೆಸಲಾಗಿದೆ. ಪ್ರತಿಯೊಂದು ಬ್ರಾಕೆಟ್ ಸ್ಥಳದಲ್ಲಿಯೂ ಬೋಲ್ಟ್‌ಗಳ ಸಮರ್ಪಕ ಗ್ರೌಟಿಂಗ್ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಲು ಪುಲ್-ಔಟ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಭಾರೀ ಸವಾಲನ್ನು ಎದುರಿಸಿದ ರೈಲ್ವೇ: 830 ಮೀಟರ್‌ವರೆಗೆ ವಿಸ್ತರಿಸಿರುವ ತೀವ್ರ ಏರುಗುಡ್ಡಗಳು ಇರುವುದರಿಂದ, ಮೇಲ್ಮೈ ವಿದ್ಯುತ್ ವ್ಯವಸ್ಥೆಯ ಒತ್ತಡ ಮತ್ತು ಸ್ಥಿರತೆಯನ್ನು ಕಾಪಾಡಲು ವಿಶೇಷ ಉಪಕರಣಗಳು ಮತ್ತು ಬಲಿಷ್ಠ ಇಂಜಿನಿಯರಿಂಗ್ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಮಳೆಗಾಲದಲ್ಲಿ ಆಗಾಗ ಸಂಭವಿಸಿದ ಭೂಕುಸಿತಗಳು, ಮಣ್ಣಿನ ಕೊಚ್ಚಿಹೋಗುವಿಕೆ ಹಾಗೂ ಶಿಲಾಪಾತಗಳು ಕಾರ್ಯಾಚರಣೆಗೆ ಸವಾಲಾಗಿತ್ತು. ಇದಕ್ಕೆ ಹೆಚ್ಚುವರಿಯಾಗಿ, ತೀವ್ರ ಏರುಗುಡ್ಡಗಳು ಮತ್ತು ಸುರಕ್ಷತಾ ಸೌಲಭ್ಯಗಳಿಗೆ ಅಗತ್ಯವಾದ ಸ್ಥಳದ ಕೊರತೆಯಿಂದ, ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಕಾರ್ಯಾಚರಣೆಯ ಅವಧಿಯಲ್ಲಿ ಕಠಿಣ ಸುರಕ್ಷತಾ ಹಾಗೂ ಕಾರ್ಯಾಚರಣಾ ನಿರ್ಬಂಧಗಳನ್ನು ವಿಧಿಸಿದ್ದರು. ಈ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು, ನಿರಂತರ ಹಾಗೂ ಸುರಕ್ಷಿತ ರೈಲು ಸಂಚಾರವನ್ನು ದೃಢಪಡಿಸುವ ಜೊತೆಗೆ ವಿದ್ಯುದೀಕರಣ ಕಾರ್ಯವನ್ನು ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿತ್ತು.

ವಿದ್ಯುದೀಕರಣ ಕಾರ್ಯ ಮತ್ತು ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ಸಂಪೂರ್ಣ ಘಾಟ್ ವಿಭಾಗವು ಈಗ ವಿದ್ಯುತ್ ಚಾಲನೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಇದರಿಂದ ಸ್ವಚ್ಛ, ಶಕ್ತಿಸಮರ್ಥ ಮತ್ತು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಸಾಧನೆ ಭಾರತೀಯ ರೈಲ್ವೆಯ ಶೇಕಡಾ 100 ವಿದ್ಯುದೀಕರಣ ಗುರಿಯ ಮಹತ್ವದ ಹೆಜ್ಜೆಯಾಗಿದ್ದು, ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲೂ ಸತತ, ಪರಿಸರ ಸ್ನೇಹಿ ಮತ್ತು ಸ್ಥಿರ ರೈಲು ಮೂಲಸೌಕರ್ಯ ನಿರ್ಮಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News