×
Ad

ಮಂಗಳೂರು: ಅಲೋಶಿಯಸ್ ಕಾಲೇಜಿನ ಮಾಜಿ ರೆಕ್ಟರ್ ಫಾ. ಲಿಯೋ ಡಿಸೋಜ ನಿಧನ

Update: 2026-01-20 21:09 IST

ಮಂಗಳೂರು, ಜ.20: ಸಂತ ಅಲೋಶಿಯಸ್ ಕಾಲೇಜಿನ ಮಾಜಿ ರೆಕ್ಟರ್ ಮತ್ತು ಪ್ರಾಂಶುಪಾಲ ಫಾ. ಲಿಯೋ ಡಿ ಸೋಜ ಎಸ್‌ಜೆ (93) ಮಂಗಳವಾರ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

ಖ್ಯಾತ ಜೆಸ್ಯೂಟ್ ಪಾದ್ರಿ, ವಿಜ್ಞಾನಿಯಾಗಿದ್ದ ಫಾ. ಲಿಯೋ ಡಿ ಸೋಜ ಅವರು ಸಸ್ಯಶಾಸ್ತ್ರ ಸಂಶೋಧಕರಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಅವರ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿತ್ತು.

ಮಂಗಳೂರಿನಲ್ಲಿ ಜನಿಸಿದ ಅವರು ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದು, ಅದೇ ಸಂಸ್ಥೆಯೊಂದಿಗೆ ಅವರು ತಮ್ಮ ಜೀವನದುದ್ದಕ್ಕೂ ನಿಕಟ ಸಂಬಂಧ ಹೊಂದಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳ ರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.

ಜರ್ಮನಿಯ ವಿಶ್ವಪ್ರಸಿದ್ಧ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ಪಿಎಚ್‌ಡಿ ಅಧ್ಯಯನವನ್ನು ನಡೆಸಿದ್ದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಸ್ವಾಯತ್ತ) ಅನ್ವಯಿಕ ಜೀವಶಾಸ್ತ್ರದ ಪ್ರಯೋಗಾಲಯವನ್ನು ಸ್ಥಾಪಿಸಿದ್ದರು.

ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ನಾಯಕತ್ವಕ್ಕೆ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ಕಳೆದ ವರ್ಷದ ಜುಲೈನಲ್ಲಿ ಕೊಲಂಬಿಯಾದ ಬೊಗೋಟಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಜೆಸ್ಯೂಟ್ ವಿಶ್ವವಿದ್ಯಾಲಯಗಳ ಸಂಘ (ಐಎಜೆಯು)ದ ಸಮ್ಮೇಳನದಲ್ಲಿ ಫಾದರ್ ಲಿಯೋ ಡಿ ಸೋಜ ಅವರಿಗೆ ಪ್ರತಿಷ್ಠಿತ ಕ್ಯಾನಿಸಿಯಸ್ ಪದಕ ನೀಡಿ ಗೌರವಿಸಲಾಗಿತ್ತು.

ಅಗಲಿದ ಫಾ. ಲಿಯೋ ಡಿ ಸೋಜ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಫಾತಿಮಾ ರಿಟ್ರೀಟ್ ಹೌಸ್‌ನಲ್ಲಿರುವ ಡಿವೈನ್ ಮರ್ಸಿ ಚರ್ಚ್‌ನಲ್ಲಿ ನೆರವೇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News