ಮಂಗಳೂರು | ಸಹಕಾರ ಸಪ್ತಾಹ ಮೆರವಣಿಗೆ ಉದ್ಘಾಟನೆ
ಮಂಗಳೂರು : 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಸಹಕಾರ ಸಪ್ತಾಹ ಆಚರಣೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಸೌಹಾರ್ದ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಆಕರ್ಷಕ ಮೆರವಣಿಗೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಬ್ಯಾಂಕಿನ ಆವರಣದಲ್ಲಿ ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ವೈವಿಧ್ಯತೆಯನ್ನೊಳಗೊಂಡ ಸಹಕಾರ ಮೆರವಣಿಗೆಯಲ್ಲಿ ಸಹಕಾರ ಸಂಘಗಳು ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರು ಈ ಸಹಕಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಹಕಾರ ರಥ, ಘಟೋತ್ಕಜ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಪುರುಷರ ಹಾಗೂ ಮಹಿಳೆಯರ ಡೊಳ್ಳು ಕುಣಿತ, ಮೊಳಹಳ್ಳಿ ಶಿವರಾವ್ ಸ್ತಬ್ಧಚಿತ್ರ, ಮಹಿಳೆಯರ ವೀರಗಾಸೆ, ಹೈಮಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ಕೆ.ಎಂ.ಎಫ್. - ನಂದಿನಿ ಆನ್ ವೀಲ್ ಸ್ತಬ್ಧಚಿತ್ರ, ಸುಗ್ಗಿ ಕುಣಿತ, ತುಳುನಾಡು ವೈಭವ ಸ್ತಬ್ಧಚಿತ್ರ, ನವೋದಯ ಪ್ರಚಾರ ವಾಹನ, ಪುರವಂತಿಗೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ. ಚೆಂಡೆ ವಾಹನ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧಚಿತ್ರ. ನವೋದಯ ಗುಂಪಿನ ಸಭೆ ನಡೆಸುವ ಸ್ತಬ್ಧಚಿತ್ರ, ಗೊರವರ ಕುಣಿತ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ಉಳುಮೆ ಮಾಡುವ ರೈತನ ಸ್ತಬ್ಧಚಿತ್ರ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 50 ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ.
ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಮಂಜುನಾಥ ಭಂಡಾರಿ, ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಐಕಳ ದೇವಿ ಪ್ರಸಾದ್ ಶೆಟ್ಟಿ, ಜಯರಾಜ ರೈ,ಮೋನಪ್ಪ ಶೆಟ್ಟಿ ಎಕ್ಕಾರ್, ಭಾಸ್ಕರ ಎಸ್ ಕೋಟ್ಯಾನ್, ಸದಾಶಿವ ಉಳ್ಳಾಲ್, ಶಶಿ ಕುಮಾರ್ ರೈ ಬಾಲ್ಯೋಟ್ಟು, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿ ಇಲಾಖೆಯ ಉಪ ರಿಜಿಸ್ಟ್ರಾರ್ ರಮೇಶ್, ಸಹಕಾರ ಇಲಾಖೆ ಪುತ್ತೂರಿನ ಸಹಾಯಕ ರಿಜಿಸ್ಟರ್ ರಘು ಮೊದಲಾದವರು ಉಪಸ್ಥಿತರಿದ್ದರು.