ಮಂಗಳೂರು | ಪುತ್ತಿಗೆ ಕುಮಾರ ಗೌಡರಿಗೆ ಬಾಬು ಕುಡ್ತಡ್ಕ ಪ್ರಶಸ್ತಿ
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.4: ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರ ನೀಡುವ 2025-26ನೇ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಸಂಚಾಲಕ ಕೆ.ಸಿ. ಹರೀಶ್ಚಂದ್ರ ರಾವ್ ತಿಳಿಸಿದ್ದಾರೆ.
ನಗರದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 7ರಂದು ಸಂಜೆ 4 ಗಂಟೆಗೆ ಮಂಗಳೂರಿನ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುತ್ತಿಗೆ ಕುಮಾರ ಗೌಡರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 10 ಸಾವಿರ ರೂ. ನಗದು, ಶಾಶ್ವತ ಫಲಕ, ಸ್ಮರಣಿಕೆ, ಪದಕ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಯಕ್ಷಗಾನ ಕಲಾವಿದರಾದ ಮೂಡಬಿದಿರೆ ಮಾಧವ ಶೆಟ್ಟರಲ್ಲಿ ಯಕ್ಷಗಾನದ ನಾಟ್ಯವನ್ನು ಕಲಿತರು. ಉರ್ವ ನಾರಾಯಣ ಶೆಟ್ಟಿಗಾರರಲ್ಲಿ ಯಕ್ಷಗಾನದ ಅರ್ಥಗಾರಿಕೆಯನ್ನು ಅಭ್ಯಸಿಸಿ, ತಮ್ಮ 17 ನೇ ವಯಸ್ಸಿನಲ್ಲಿ ಒಬ್ಬ ಪೂರ್ಣ ಪ್ರಮಾಣದ ಕಲಾವಿದರಾದರು. ವೇಣೂರು ಮೇಳ ಆನಂತರ ಧರ್ಮಸ್ಥಳ, ಕೂಡ್ಲು, ಕುಂಡಾವು ಮೇಳಗಳಲ್ಲಿ ತಿರುಗಾಟ ನಡೆಸಿ 1976 ರಲ್ಲಿ ಸುರತ್ಕಲ್ ಮೇಳ ಸೇರಿ ನಿರಂತರ 25 ವರ್ಷಗಳ ಕಾಲ ಮೇಳದಲ್ಲಿ ದುಡಿದರು. 33 ವರ್ಷಗಳ ತಿರುಗಾಟದಲ್ಲಿ ಯಾರೊಂದಿಗೂ ನಿಷ್ಟುರ ಹೊಂದಿಲ್ಲದೇ ಆಜಾತಶತ್ತು ಎನಿಸಿಕೊಂಡಿದ್ದರು. ಉತ್ತಮ ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆ ಹೊಂದಿದ್ದ ಕುಮಾರ ಗೌಡರಿಗೆ ದೇವೇಂದ್ರ, ಅರ್ಜುನ, ಸುಗ್ರೀವ, ಭೀಮ, ಶ್ರೀರಾಮ, ಧರ್ಮರಾಯ ಮುಂತಾದ ಪಾತ್ರಗಳು ಪ್ರಸಿದ್ಧಿ ತಂದು ಕೊಟ್ಟಿವೆ. ಸ್ತ್ರೀ ಪಾತ್ರಗಳಲ್ಲೂ ಮಿಂಚುತ್ತಿದ್ದರಲ್ಲದೇ ರಾಜಮಾತೆ, ಕೌಕಭಟ್ಟನ ಮಡದಿ, ದೇಯಿಬೈದಿತಿ, ಸೀತೆ, ಮಂಡೋದರಿಯಂಥಹ ವಿಭಿನ್ನ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಯಕ್ಷರಂಗದಿಂದ ನಿವೃತ್ತರಾದರೂ, ಯಕ್ಷಗಾನದ ಚಟುವಟಿಕೆಗಳಲ್ಲಿ ಇಂದಿಗೂ ತೊಡಗಿಸಿಕೊಂಡಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ.ಬಿ. ಪ್ರಕಾಶ್ ಪೈ, ಅಧ್ಯಕ್ಷೆ ಲಲಿತಾ ಗೌಡ, ಪ್ರ. ಕಾರ್ಯದರ್ಶಿ ಆನಂದರಾವ್, ಖಚಾಂಚಿ ಅಶೋಕ್ ಜಾಧವ್, ಸೇವಾ ಕಾರ್ಯದರ್ಶಿ ಸುಮಲತಾ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲಾ ಹಾಗೂ ಮನೋಜ್ ಉಪಸ್ಥಿತರಿದ್ದರು.