ಮಂಗಳೂರು | ಬೆಳೆ ವಿಮೆ ಪರಿಹಾರ ಅಸಮರ್ಪಕ : ಪರಿಷ್ಕರಿಸಲು ರೈತ ಮುಖಂಡರ ಆಗ್ರಹ
ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕೃಷಿ ಪತ್ತಿನ ಸಹಕಾರಿ ಮುಖಂಡರ ಸಭೆ
ಮಂಗಳೂರು,ಡಿ.12 : ಬೆಳೆ ವಿಮೆ ಪರಿಹಾರದಲ್ಲಿ ನ್ಯೂನತೆಯಾಗಿದ್ದು, ಪರಿಷ್ಕರಣೆಯಾಗಬೇಕು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಎಸ್ ಸಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಆಗ್ರಹಿಸಿದರು.
ಸಭೆಯಲ್ಲಿ ಬೆಳೆ ವಿಮೆಯ ಪರಿಹಾರವನ್ನು ಸಹಕಾರಿ ಬ್ಯಾಂಕುಗಳ ಮೂಲಕ ರೈತರಿಗೆ ಪಾವತಿಸಿದರೆ ಉತ್ತಮ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ತೋಟಗಾರಿಕಾಧಿಕಾರಿ ದರ್ಶನ್ ಈ ಬಗ್ಗೆ ಮಾಹಿತಿ ನೀಡುತ್ತಾ, ಕಳೆದ ವರ್ಷ 215 ಕೋಟಿ ರೂ. ಪ್ರಿಮಿಯಂ ಸಂಗ್ರಹವಾಗಿದೆ. 270 ಕೋಟಿ ರೂ. ಪಾವತಿಯಾಗಿದೆ. ಈ ವರ್ಷ 277 ಕೋಟಿ ಬೆಳೆ ವಿಮಾ ಕಂತು ಸಂಗ್ರಹಿಸಲಾಗಿದೆ. ಇದುವರೆಗೆ 169 ರೂ. ಕೋಟಿ ಪಾವತಿಯಾಗಿದೆ. ಬೆಳೆ ವಿಮಾ ಪಾವತಿ ಕಡಿಮೆಯಾಗಿರುವ ಕಾರಣ ಪರಿಷ್ಕರಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಳೆ ಮಾಪನ ಸರಿಯಾಗಿ ಆಗುತ್ತಿಲ್ಲ. ಇದರಿಂದ ವಿಮಾ ಪರಿಹಾರ ಮೊತ್ತ ಸರಿಯಾಗಿ ಪಾಪಾವತಿಯಾಗಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಹೇಶ್ ಕರಿಕ್ಕಳ ಆರೋಪಿಸಿದರು.
ಬೆಳೆ ವಿಮೆಮಾಡುವ ಸಂದರ್ಭದಲ್ಲಿ ಪಾಲಿಸಿದಾರರಿಗೆ ವೈಯಕ್ತಿಕವಾಗಿ ಪಾಲಿಸಿ ಬಾಂಡ್ ನೀಡಬೇಕು. ಪ್ರಸ್ತುತ ವಿಮಾ ಪಾಲಿಸಿ ದಾಖಲೆ ನೀಡುತ್ತಿಲ್ಲ ಎಂದು ಪ್ರಕಾಶ್ ಚಂದ್ರ ಕಂಬದ ಕೋಣೆ ಆರೋಪಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ಬೆಳೆ ವಿಮೆಯ ನ್ಯೂನತೆಯ ಕಾರಣದಿಂದ ರೈತರಿಂದ ಬೈಗುಳ ವನ್ನು ತಿನ್ನಬೇಕಾಗಿದೆ. ಈ ನ್ಯೂನತೆ ಸರಿಪಡಿಸಬೇಕಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್.ಸತೀಶ್ಚಂದ್ರ , ಎಸ್ ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರುಗಳಾದ ಟಿ.ಜಿ.ರಾಜಾರಾಮ ಭಟ್, ಎಂ.ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್.ಬಿ. ಜಯರಾಮ್ ರೈ, ಕೆ.ಜೈರಾಜ್ ಬಿ.ರೈ., ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಎಸ್.ಎನ್.ಮನ್ಮಥ, ಕುಶಲಪ್ಪ ಗೌಡ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸ್ಕ್ಯಾಡ್ಸ್ ಅಧ್ಯಕ್ಷರಾದ ರವೀಂದ್ರ ಕಂಬಳಿ, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್.ಎನ್., ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ದರ್ಶನ್, ಉಡುಪಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಧೀಶ್, ಟಾಟಾ ಎಐಜಿ ಜನರಲ್ ಇನ್ಸೂರೆನ್ಸ್ ಕಂಪನಿಯ ಹಿರಿಯ ಪ್ರಬಂಧಕ ಶುಭಂ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಸ್ವಾಗತಿಸಿದರು.