ಅಭಿವೃದ್ಧಿಯಲ್ಲಿ ಜಿಲ್ಲಾಡಳಿತ, ಪಂಚಾಯತ್‌ಗಳ ಪಾತ್ರ ಮಹತ್ವವಾದುದು : ರಾಜು ಮೊಗವೀರ
ಕೊಣಾಜೆ: ಅಭಿವೃದ್ದಿಯಲ್ಲಿ ಜಿಲ್ಲಾಡಳಿತ ಮತ್ತು ಪಂಚಾಯತ್‌ಗಳ ಪಾತ್ರ ಮಹತ್ವವಾದುದು. ಜಿಲ್ಲಾಡಳಿತವು ಸರ್ಕಾರದ ಎಲ್ಲಾ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಾರಿಗೆ ತರುವುದು, ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಜನರಿಗೆ ಅಗತ್ಯ ಸೇವೆಗಳನ್ನು ನೀಡುವ ಕೆಲಸ ಮಾಡುತ್ತದೆ. ಪ್ರವಾಹ, ಬರ, ಪ್ರಕೃತಿ ವಿಕೋಪಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಕೂಡ ಜಿಲ್ಲಾಡಳಿತವೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವರಾದ ರಾಜು ಮೊಗವೀರ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗುರುವಾರ ರಾಜ್ಯಶಾಸ್ತ್ರ ವಿಭಾಗ ಮತ್ತು ರಾಜ್ಯಶಾಸ್ತ್ರ ಸಂಘದ ವತಿಯಿಂದ ‘ಅಭಿವೃದ್ದಿಯಲ್ಲಿ ಜಿಲ್ಲಾ ಆಡಳಿತ ಮತ್ತು ಪಂಚಾಯತ್‌ಗಳ ಪಾತ್ರ’ ಕುರಿತಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮೀಣಾಭಿವೃದ್ಧಿಯ ಮೂಲಸ್ತಂಭವಾಗಿದೆ. 73ನೇ ತಿದ್ದುಪಡಿ ನಂತರ ಗ್ರಾಮದಿಂದ ಜಿಲ್ಲೆ ಮಟ್ಟದ ಅಭಿವೃದ್ಧಿ ನಿರ್ಧಾರಗಳಲ್ಲಿ ನೇರವಾಗಿ ಭಾಗವಹಿಸುತ್ತವೆ. ಗ್ರಾಮ ನೀರು, ರಸ್ತೆ, ನೈರ್ಮಲ್ಯ, ಮನೆ-ಬೆಳಕು, ಕಸ ನಿರ್ವಹಣೆ ಮುಂತಾದ ಸೇವೆಗಳನ್ನು ಗ್ರಾಮ ಪಂಚಾಯತ್ ನೇರವಾಗಿ ನಿರ್ವಹಿಸುತ್ತದೆ. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿರುವುದರಿಂದ ರಾಜಕೀಯ ಸಬಲೀಕರಣವೂ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಜಯರಾಜ್ ಅಮೀನ್ ಅವರು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಶಾನಿ ಕೆ.ಆರ್, ಉಪನ್ಯಾಸಕರಾದ ಡಾ.ಸಿ.ಎಮ್ ರಾಜ್ ಪ್ರವೀಣ್, ಡಾ.ವೆಂಕಟೇಶ್ ಹೆಚ್.ಎಸ್, ಹಾಗೂ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದರು. ಡಾ.ಸಿ.ಎಮ್ ರಾಜ್ ಪ್ರವೀಣ್ ಸ್ವಾಗತಿಸಿದರು, ಲೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.