×
Ad

ಮಂಗಳೂರು | ಬೀದಿ ನಾಯಿಗಳ ಹಾವಳಿ : ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿ ಸೂಚನೆ

Update: 2025-11-21 18:41 IST

ಸಾಂದರ್ಭಿಕ ಚಿತ್ರ (Photo: PTI)

ಮಂಗಳೂರು,ನ.21: ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಅನುಷ್ಠಾನದ ಕುರಿತು ದ.ಕ. ಜಿಲ್ಲಾ ಮಟ್ಟದ ಸಮಿತಿ ಸಭೆಯು ಶುಕ್ರವಾರ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್., ಮಹಾನಗರಪಾಲಿಕೆ, ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬೀದಿ ನಾಯಿಗಳ ಗಣತಿಯನ್ನು ಮಾಡಿ ವರದಿ ಸಲ್ಲಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಹಾಗೂ ಪ್ರವಾಸಿ ತಾಣಗಳ ಆವರಣದಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂತಾನಹರಣ ಶಶ್ತ್ರಚಿಕಿತ್ಸೆ ನಡೆಸಿ ಈಗಾಗಲೆ ಗೊತ್ತುಪಡಿಸಿದ ನಾಯಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳು ನುಸುಳದಂತೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಕ ಮಾಡಿ ಪಾಲನಾ ವರದಿ ಸಲ್ಲಿಸಲು ಸೂಚಿಸಿದರು.

ಪ್ರತೀ 3 ತಿಂಗಳಿಗೊಮ್ಮೆ ಈ ಎಲ್ಲಾ ಸಂಸ್ಥೆಗಳ ಆವರಣದ ಒಳಗೆ ಮತ್ತು ಹೊರಗೆ ಬೀದಿ ನಾಯಿಗಳ ವಾಸಸ್ಥಾನ ಇಲ್ಲದಿರುವ ಬಗ್ಗೆ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು. ಸಾರ್ವಜನಿಕ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪಾರ್ಕ್, ಡಿಪೋ ಮತ್ತು ಟರ್ಮಿನಲ್ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ಸಿಗದಂತೆ ನೋಡಲ್ ಅಧಿಕಾರಿಗಳು ಕ್ರಮವಹಿಸಬೇಕು. ಎಲ್ಲಾ ತಾಲೂಕಿನ ತಹಶೀಲ್ದಾರರು ಹಾಗೂ ತಾಪಂ ಇಒ ಬೀದಿ ನಾಯಿ ಆಶ್ರಯ ಕೇಂದ್ರವನ್ನು ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಹೆದ್ದಾರಿಗಳಲ್ಲಿ ಎಲ್ಲಾ ದನ ಮತ್ತು ಬೀಡಾಡಿ ಪ್ರಾಣಿಗಳನ್ನು ಆಶ್ರಯತಾಣ/ಗೋಶಾಲೆಗೆ ಸ್ಥಳಾಂತರಿಸುವಂತೆ ರಾ.ಹೆ. ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಮತ್ತು ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಡಿಸಿ ತಿಳಿಸಿದರು.

ಸಾರಿಗೆ, ಹೆದ್ದಾರಿ ಮತ್ತು ಪೊಲೀಸ್ ಇಲಾಖೆಯಿಂದ ಹೆದ್ದಾರಿ ಗಸ್ತು ತಂಡ ರಚಿಸಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಈ ಸಂಖ್ಯೆಗಳನ್ನು ಕಂಟ್ರೋಲ್ ರೂಂ, ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಗೆ ಲಿಂಕ್ ಮಾಡಲು ಸೂಚಿಸಿದರು.

ಮಹಾ ನಗರ ಪಾಲಿಕೆ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರಗಳನ್ನು ಹಾಕುವ ಸ್ಥಳ ಮತ್ತು ಸಮಯವನ್ನು ಕೂಡಲೇ ನಿಗದಿಪಡಿಸುವಂತೆ ನಿರ್ದೇಶನ ನೀಡಿದರು. ಈ ಬಗ್ಗೆ ಭಿತ್ತಿಪತ್ರಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಎಚ್.ವಿ.ದರ್ಶನ್ ತಿಳಿಸಿದರು.

ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕನಿಷ್ಟ 100 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ತಾಪಂ ಇಒಗಳಿಗೆ ಸೂಚಿಸಿದರು.

ಸುಪ್ರೀಂ ಕೋರ್ಟ್ ಗೆ ಡಿಸೆಂಬರ್ 20ರೊಳಗೆ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ ಈ ಎಲ್ಲಾ ಸೂಚನೆಗಳಿಗೆ ಕ್ರಮ ಕೈಗೊಂಡು ಪ್ರತಿಯೊಂದು ಇಲಾಖೆಯು ಪಾಲನಾ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ (ಪೌರಾಡಳಿತ) ಡಿ.15ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಆದೇಶಿಸಿದರು.

ಸಮಿತಿಯ ಸದಸ್ಯ ಕಾರ್ಯದರ್ಶಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಮಾತನಾಡಿ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 7ರಂದು ಸರ್ವೋಚ್ಚ ನ್ಯಾಯಾಲಯವು ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ನರ್ವಡೆ ವಿನಾಯಕ್ ಖರ್ಭೂರಿ, ಅಪರ ಜಿಲ್ಲಾಧಿಕಾರಿ ರಾಜು ಕೆ., ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಮಹಾನಗರಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News