ನಿಷೇಧಿತ ಪಿಎಫ್‌ಐ ಸಂಘಟನೆಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ: ಆರೋಪಿ ಸೈಯದ್ ಇಬ್ರಾಹೀಂ ತಂಙಳ್ ಬಂಧನ
► ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು
ಮಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಡಿದ ಆರೋಪದಲ್ಲಿ ಸೈಯದ್ ಇಬ್ರಾಹೀಂ ತಂಙಳ್(55)ನನ್ನು ಬಂದರ್ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿಯನ್ನು ಬೆಂಗಳೂರಿನ 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಮತ್ತು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಅ.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
2022ರ ಸೆ.28ರಂದು ಪಿಎಫ್‌ಐ ಕಾನೂನುಬಾಹಿರ ಸಂಘಟನೆ ಎಂದು ಕೇಂದ್ರ ಸರಕಾರ ಘೋಷಿಸಿ ನಿಷೇಧಿಸಿತ್ತು. 2025ರ ಅ.9ರಂದು ಆರೋಪಿ ಉಪ್ಪಿನಂಗಡಿಯ ರಾಮಕುಂಜ ಗ್ರಾಮದ ಸೈಯದ್ ಇಬ್ರಾಹಿಂ ತಂಙಳ್ ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪಿಎಫ್‌ಐ ಸಂಘಟನೆಯ ಪರವಾಗಿ ಪೋಸ್ಟ್ ಹಂಚಿ, ಪ್ರಚಾರ ಮಾಡಿ ಆತಂಕವನ್ನುಂಟು ಮಾಡಿರುವುದಾಗಿ ಬಂದರ್ ಠಾಣೆಯ ಎಸ್ಸೈ ನೀಡಿದ ದೂರಿನಂತೆ 113/2025 U/s 10 (a), (i), 13, 18 UAPA ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ನಗರದ ಉರ್ವಸ್ಟೋರ್ ಬಳಿ ಆರೋಪಿಯನ್ನು ಬಂಧಿಸಿ ಆತನ ವಶದಲ್ಲಿದ್ದ ಮೊಬೈಲ್ ಫೋನ್ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.