ಮುಸ್ಲಿಮ್ ಮುಖಂಡರ ಜತೆ ಸಭೆ ನಡೆಸಿ ವಿಷಾದ ಪತ್ರ ಬರೆದ ತೆಕ್ಕಾರಿನ ಶ್ರೀ ಗೋಪಾಲಕೃಷ್ಣ ದೇವಳದ ಆಡಳಿತ ಮಂಡಳಿ
ಬೆಳ್ತಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಸ್ಥಳೀಯ ಶಾಸಕ ಹರೀಶ್ ಪೂಂಜಾ ಗ್ರಾಮದ ಮುಸ್ಲಿಮರ ವಿರುದ್ದ ಅತ್ಯಂತ ಅವಹೇಳನಕಾರಿ, ದ್ವೇಷ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮ್ ಮುಖಂಡರ ಜತೆ ದೇವಸ್ಥಾನದ ಆಡಳಿತ ಮಂಡಳಿಯು ಸಭೆ ನಡೆಸಿತು.
ಇದೀಗ ಶ್ರೀ ಗೋಪಾಲಕೃಷ್ ಭಟ್ರಬೈಲು, ದೇವರ ಗುಡ್ಡೆ ಸೇವಾ ಟ್ರಸ್ಟ್ ಅಧ್ಯಕ್ಷರು ಸರಳೀಕಟ್ಟೆ ಮುಸ್ಲಿಮ್ ಒಕ್ಕೂಟದವರಿಗೆ ಪತ್ರ ಬರೆದು ದ್ವೇಷ ಭಾಷಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಹಿಂದಿನ ಹಾಗೆಯೇ ಸೌಹಾರ್ದಯುತವಾದ ಬದುಕು ನಡೆಯಬೇಕಾಗಿದೆ. ಮುಸ್ಲಿಮರ ಸಹಕಾರವನ್ನು ದೇವಸ್ಥಾನ ಆಡಳಿತ ಮಂಡಳಿ ಸ್ವಾಗತಿಸುತ್ತದೆ. ಮುಂದೆಯೂ ಎಲ್ಲಾ ಸಮುದಾಯದವರು ಒಬ್ಬರಿಗೊಬ್ಬರು ಸಹಕಾರದೊಂದಿಗೆ ಬದುಕಬೇಕು ಎಂಬುದು ನಮ್ಮ ಆಶಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಘಟನೆ ನಡೆದಿರುವುದರ ಬಗ್ಗೆ ಸ್ಥಳೀಯ ಮುಸ್ಲಿಂ ಒಕ್ಕೂಟ ದೇವಸ್ಥಾನದ ಆಡಳಿತ ಮಂಡಳಿಗೆ ತಮ್ಮ ನಿಲುವಿನ ಕುರಿತು ಸ್ಪಷ್ಠಪಡಿಸುವಂತೆ ಪತ್ರ ಬರೆದಿತ್ತ., ಇದಕ್ಕೆ ಸ್ಪಷ್ಠೀಕರಣ ನೀಡುವ ಸಲುವಾಗಿ ಹಿಂದೂ - ಮುಸ್ಲಿಮ್ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಘಟನೆ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿಯು ತೀವ್ರ ವಿಷಾದ ವ್ಯಕ್ತಪಡಿಸಿತು ಎನ್ನಲಾಗಿದೆ.
ಸ್ಥಳೀಯ ಮುಸ್ಲಿಮರು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಮಾಡಿದ್ದರು. ಮುನೀರ್ ಎಂಬವರು ಮರವನ್ನು ನೀಡಿದ್ದರು, ಅಬ್ಬಾಸ್ ಎಂಬವರು ವೇದಿಕೆ ನಿರ್ಮಿಸಲು ಸ್ಥಳವನ್ನು ನೀಡಿದ್ದರು, ಭಕ್ತಾದಿಗಳಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಟಿ.ಎಚ್.ಉಸ್ತಾದರ ಮಕ್ಕಳ ಒಡೆತನದ ಜಮೀನಿನಲ್ಲಿ ನೀಡಲಾಗಿತ್ತು, ನೀರಿನ ವ್ಯವಸ್ಥೆಗೆ ಮತ್ತು ಅನ್ನ ಸಂತರ್ಪಣೆಗೆ ಮುಸ್ಲಿಮರ ಜಾಗವನ್ನೇ ಬಳಸಲಾಗಿತ್ತು. ಇದಲ್ಲದೆ ಆರ್ಥಿಕವಾಗಿಯೂ ಗ್ರಾಮದ ಮುಸ್ಲಿಮರು ದೇವಸ್ಥಾನಕ್ಕೆ ಸಹಾಯವನ್ನು ನೀಡಿದ್ದರು. ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಸ್ಥಳೀಯ ಮುಸ್ಲಿಮರು ಬ್ಯಾನರ್ ಗಳನ್ನು ಅಳವಡಿಸಿದ್ದರ ಬಗ್ಗೆ ಮುಸ್ಲಿಮ್ ಒಕ್ಕೂಟದ ಪ್ರತಿನಿಧಿಗಳು ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳ ಗಮನ ಸೆಳೆದರು.
ಮೇ 3ರಂದು ರಾತ್ರಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಭಾಗವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, "ತೆಕ್ಕಾರಿನ ಕಂಟ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ" ಎಂದು ಆರಂಭಿಸಿ ಊರಿನ ಮುಸ್ಲಿಮರ ವಿರುದ್ದ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕೋಮು ದ್ವೇಷ ಕಾರಿರುವ ಹರೀಶ್ ಪೂಂಜಾರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಕೂಡಾ ದಾಖಲಾಗಿದೆ.