ಮಾದಕ ವ್ಯಸನಕ್ಕೆ ದಾಸರಾಗದೆ ಜೀವನದಲ್ಲಿ ಮುನ್ನಡೆಯಿರಿ : ಪುನೀತ್ ಗಾಂವ್ಕರ್
ಕೊಣಾಜೆ: ವಿದ್ಯಾರ್ಥಿಗಳು ಜೀವನದುದ್ದಕ್ಕೂ ಮಾದಕ ವ್ಯಸನಕ್ಕೆ ದಾಸರಾಗದೇ, ಭವಿಷ್ಯವನ್ನು ಗಟ್ಟಿಯಾಗಿಸುವೆಡೆಗೆ ಪ್ರಯತ್ನ ಮಾಡಬೇಕು. ಡ್ರಗ್ ಫ್ರೀ ಮಂಗ್ಳೂರು ಸಿಟಿ ಗಾಗಿ ವಿದ್ಯಾರ್ಥಿಗಳೇ ಸಾರಥಿಗಳಾಗಿದ್ದಾರೆ ಎಂದು ಕೊಣಾಜೆ ಪೊಲೀಸ್ ಠಾಣಾ ಉಪನಿರೀಕ್ಷಕ ಪುನೀತ್ ಗಾಂವ್ಕರ್ ಹೇಳಿದರು.
ಅವರು ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಅಧೀನದ ಫಿಸಿಯೋಥೆರಪಿ , ನರ್ಸಿಂಗ್ ಹಾಗೂ ಅಲೈಡ್ ಸೈನ್ಸಸ್ ವಿಭಾಗದ 2023-24 ಬ್ಯಾಚ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಓರಿಯೆಂಟೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರ‌್ಯಾಗಿಂಗ್ ನಡೆಸಿದಲ್ಲಿ ಜೈಲು ಖಚಿತ. ಉತ್ತಮ ನಡವಳಿಕೆ ಇದ್ದುಕೊಂಡು ಕಾಲೇಜು ಸೇರಿಕೊಂಡಿದ್ದೀರಿ. ಅದನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ. ಪೊಲೀಸ್ ಇಲಾಖೆಗೆ ಡ್ರಗ್ ಟೆಸ್ಟ್ ಗಳನ್ನು ಉಚಿತವಾಗಿ ಕಣಚೂರು ಸಂಸ್ಥೆ ಒದಗಿಸುತ್ತದೆ. ಇದರಿಂದ ವ್ಯಸನಿಗಳ ಕಾರ್ಯಾಚರಣೆ ವ್ಯಾಪಕವಾಗಿ ನಡೆಸಲು ಸಾಧ್ಯವಾಗಿದೆ. ಕಾಲೇಜು ಸೇರ್ಪಡೆ ಗೊಂಡ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಿ. ಐಷಾರಾಮಿ ಜೀವನ ನಡೆಸಬೇಕೆಂಬ ದುರಾಸೆಯಿಂದ ಹಲವು ವಿದ್ಯಾರ್ಥಿಗಳು ಸೈಬರ್ ಕ್ರೈಂ ಮೂಲಕ ಪಾಕೆಟ್ ಮನಿಯನ್ನು ಕಳೆದುಕೊಳ್ಳುವಂತಾಗಿದೆ. ನಾಲ್ಕು ವರ್ಷದ ಕಲಿಕಾ ಅವಧಿಯಲ್ಲಿ ಹೆಚ್ಚು ಕಲಿಕೆಯತ್ತ ಗಮನಹರಿಸಿ , ಇತರೆ ಚಟುವಟಿಕೆಗಳಿಗೆ ಬಲಿಯಾಗದಿರಿ ಎಂದರು.
ಅಧ್ಯಕ್ಷತೆ ವಹಿಸಿದ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಚೇರ್ ಮೆನ್ ಡಾ. ಯು.ಕೆ. ಮೋನು ಮಾತನಾಡಿ ಈ ಮಣ್ಣಿನ ಕಾನೂನು ಪ್ರಕಾರವೇ ಶೈಕ್ಷಣಿಕ ಬದುಕು ರೂಪಿತವಾಗಿದೆ. ಒಂದು ಕುಟುಂಬದಲ್ಲಿ ಬದುಕಿದ ವಿದ್ಯಾರ್ಥಿಗಳು ದೂರದ ಊರಿನ ಒಂದು ಶೈಕ್ಷಣಿಕ ಸಂಸ್ಥೆಯಲ್ಲಿ ಕಲಿಯುತ್ತಿರುವಾಗ ದುಖಿತರಾಗುವುದು ಸಹಜ. ಒಂದಂತೂ ಸತ್ಯ. ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯ ಸ್ವಾರ್ಥರಹಿತ ಸೇವೆ ಯಾವುದೋ ಒಂದು ಜೀವ ಉಳಿಸುವ ಸೇವೆಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಅದನ್ನು ಜತನದಿಂದ ಕಾಪಾಡಿಕೊಂಡು ಬರುವುದು ತಮ್ಮ ಜವಬ್ದಾರಿ ಎಂದು ಅಭಿಪ್ರಾಯಪಟ್ಟರು.
ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ಆರೋಗ್ಯ ವಿಜ್ಞಾನ ಅಕಾಡೆಮಿ ಮುಖ್ಯಸ್ಥ ಡಾ. ಮೊಹಮ್ಮದ್ ಇಸ್ಮಾಯಿಲ್, ಕಣಚೂರು ಆರೋಗ್ಯ ವಿಜ್ಞಾನ ಅಕಾಡೆಮಿ ಮುಖ್ಯಸ್ಥ ಸಲಹೆಗಾರ ಡಾ.ಎಂ. ವೆಂಕಟ್ರಾಯ ಪ್ರಭು, ಫಾರೆನ್ಸಿಕ್ ವಿಜ್ಞಾನಗಳ ಮುಖ್ಯಸ್ಥ ಡಾ. ಶಹನವಾಝ್ ಮಾಣಿಪ್ಪಾಡಿ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಫಿಸಿಯೋಥೆರಪಿ ಕಾಲೇಜಿನ ಡೀನ್ ಮೊಹಮ್ಮದ್ ಸುಹೈಲ್ ಸ್ವಾಗತಿಸಿದರು. ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಮೋನಿ ಸಾಲ್ದಾನಾ ಸ್ವಾಗತಿಸಿದರು. ಅಲೈಡ್ ಹೆಲ್ತ್ ಸೈನ್ಸಸ್ ಪ್ರಿನ್ಸಿಪಾಲ್ ಡಾ. ಶಮೀಮಾ ವಂದಿಸಿದರು.