×
Ad

ಮಂಗಳೂರು-ಕಾಶ್ಮಿರ ನಡುವಿನ ನವಯುಗ ಎಕ್ಸ್‌ಪ್ರೆಸ್ ರೈಲು ಪುನರಾರಂಭ: ವರದಿ ನೀಡಲು ಪತ್ರ ರವಾನೆ

Update: 2025-07-22 20:07 IST

ಮಂಗಳೂರು: ಕೋವಿಡ್ ಸಂದರ್ಭ ಸ್ಥಗಿತಗೊಂಡಿದ್ದ ಮಂಗಳೂರಿನಿಂದ ಕಾಶ್ಮಿರ ಕತ್ರಾ ಬೆಸೆಯುವ ನವಯುಗ ಎಕ್ಸ್‌ಪ್ರೆಸ್ ರೈಲು ಮಂಗಳೂರು-ಅರಸೀಕೆರೆ-ಮೀರಜ್ ಮಾರ್ಗ ಪುನರಾರಂಭಿಸುವ ಕುರಿತು ಸಾಧಕ-ಭಾದಕಗಳನ್ನು ಅಧ್ಯಯನ ನಡೆಸಿ ವರದಿ ನೀಡುವಂತೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯದ ಚೀಫ್ ಪ್ಯಾಸೆಂಜರ್ ಟ್ರಾನ್ಸ್‌ಪೋರ್ಟೇಶನ್ ಮ್ಯಾನೇಜರ್ ಮೈಸೂರು ವಿಭಾಗಕ್ಕೆ ಪತ್ರ ರವಾನಿಸಿದ್ದಾರೆ.

ರೈಲ್ವೆ ಯಾತ್ರಿಕರ ಸಂಘ-ಸಂಸ್ಥೆಗಳ ಬೇಡಿಕೆಯ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ರ ನಿರ್ದೇಶನದಂತೆ ನೈರುತ್ಯ ರೈಲ್ವೆ ಈ ಆದೇಶ ಹೊರಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿ ಜು.23ರಂದು ಪೂ.11ರೊಳಗೆ ವರದಿ ನೀಡುವಂತೆ ಕಾಲಮಿತಿ ಹಾಕಲಾಗಿದೆ.

ಕೋವಿಡ್ ಮೊದಲು ಈ ನವಯುಗ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಕೇರಳ-ತಮಿಳುನಾಡು ಮಾರ್ಗ ಶ್ರೀ ಮಾತಾ ವೈಷ್ಣೊದೇವಿ ಕತ್ರಾ ತಲುಪುತ್ತಿತ್ತು. ಈ ರೈಲು ಮಂಗಳೂರು-ಅರಸೀಕೆರೆ-ಮೀರಜ್ ಮಾರ್ಗ ಪುನರಾರಂಭಿಸುವಂತೆ ಪ್ರಯಾಣಿಕರ ಒತ್ತಾಯದ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಕ್ರಮ ಕೈಗೊಳ್ಳುವಂತೆ ನೈರುತ್ಯ ರೈಲ್ವೆಗೆ ಸೂಚನೆ ನೀಡಿದ್ದರು. ಅದರಂತೆ ಈ ಪತ್ರ ರವಾನಿಸಲಾಗಿದೆ.

ಪ್ರಸ್ತುತ ತಮಿಳುನಾಡಿನ ತಿರುನಲ್ವೇಲಿಯಿಂದ ಪ್ರಯಾಣಿಸುವ ಶ್ರೀ ಮಾತಾ ವೈಷ್ಣೊದೇವಿ ಕತ್ರಾ ಎಕ್ಸ್‌ಪ್ರೆಸ್ (16787) ಸುತ್ತು ಬಳಸಿ ಲುಧಿಯಾನ-ಹೊಸದಿಲ್ಲಿ ಮಾರ್ಗ ಸಂಚರಿಸುತ್ತಿದೆ. ಈ ರೈಲು ಮಂಗಳೂರು-ಕೊಂಕಣ ರೈಲು ಮಾರ್ಗಕ್ಕೆ ಬದಲಿಸಬೇಕು ಎನ್ನುವ ಬೇಡಿಕೆಯು ತಮಿಳುನಾಡು ಭಾಗದ ಮುಖಂಡರಿಂದ ಕೇಳಿ ಬರುತ್ತಿದೆ.

ನವಯುಗ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ-ಮೀರಜ್ ಮಾರ್ಗ ಪುನರಾರಂಭಿಸುವ ಜತೆ ತಮಿಳುನಾಡಿನ ಜನರ ಬೇಡಿಕೆಯಂತೆ ತಿರುನಲ್ವೇಲಿಯಿಂದ ಹೊರಡುತ್ತಿರುವ ಶ್ರೀ ಮಾತಾ ವೈಷ್ಣೊದೇವಿ ಕತ್ರಾ ಎಕ್ಸ್‌ಪ್ರೆಸ್ ರೈಲು ಮಂಗಳೂರು-ಕೊಂಕಣ ರೈಲು ಮಾರ್ಗಕ್ಕೆ ಬದಲಿಸಿದರೆ ಕರಾವಳಿಯ ಜನರಿಗೆ ಅನುಕೂಲವಾಗಲಿದೆ ಎಂದು ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗದ ಸಲಹಾ ಸಮಿತಿ ಸದಸ್ಯ, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಹನುಮಂತ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಕೊಂಕಣ ಮಾರ್ಗ ಹಾಗೂ ಸುಬ್ರಹ್ಮಣ್ಯ ರೋಡ್ ಮಾರ್ಗ ಉಭಯ ಕಡೆಗಳ ಪ್ರಯಾಣಿಕರಿಗೆ ಪ್ರಯೋಜನ ದೊರೆಯಲಿದೆ. ಶ್ರೀ ಮಾತಾ ವೈಷ್ಣೊದೇವಿ ಕತ್ರಾ ಎಕ್ಸ್‌ಪ್ರೆಸ್ ಕೊಂಕಣ ರೈಲ್ವೆ ಮಾರ್ಗ ಸಂಚರಿಸಿದರೆ ಇದು ತಮಿಳುನಾಡು, ಕೇರಳ, ಕರ್ನಾಟಕ ಭಾಗಕ್ಕೆ ಸಂಪರ್ಕ ಒದಗಿಸಲಿದೆ ಎಂದು ಹನುಮಂತ ಕಾಮತ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News