×
Ad

ಬ್ರಾಂಡೆಡ್ ಹೆಸರಲ್ಲಿ ನಕಲಿ ಕ್ರೀಡಾ ಸಾಮಗ್ರಿಗಳ ಮಾರಾಟ ಜಾಲ| ಪಂಜಾಬ್‌ನಿಂದ ಸರಬರಾಜು; ಮುಂದುವರಿದ ತನಿಖೆ

Update: 2025-08-19 17:51 IST

ಮಂಗಳೂರು: ನಗರದಲ್ಲಿ ಬ್ರಾಂಡೆಡ್ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೇಧಿಸಿರುವ ಮಂಗಳೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಬ್ರಾಂಡ್‌ ಗಳ 300ಕ್ಕೂ ಅಧಿಕ ನಕಲಿ ಕ್ರೀಡಾ ಸಾಮಗ್ರಿಗಳನ್ನು ವಸಪಡಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಮಿಥುನ್ ಎಚ್.ಎನ್., ಕ್ರೀಡಾ ಸಾಮಗ್ರಿಗಳ ಪ್ರಮುಖ ಬ್ರಾಂಡ್‌ಗಳಾದ ಕೋಸ್ಕೋ, ನಿವಿಯಾ ಹಾಗೂ ಯೋನೆಕ್ಸ್ ಹೆಸರಿನಲ್ಲಿ ನಕಲಿ ಫುಟ್‌ಬಾಲ್, ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ರಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬ್ರಾಂಡ್ ಪ್ರೊಟೆಕ್ಟರ್ ಇಂಡಿಯಾ ಪ್ರೈ ಲಿಮಿಟೆಡ್‌ನ ದಕ್ಷಿಣ ಭಾರತ ಪ್ರಾದೇಶಿಕ ಮುಖ್ಯಸ್ಥ ಸ್ಟೀಫನ್ ರಾಜ್ ಎಂಬವರು ನೀಡಿದ ದೂರಿದ ಮೇರೆಗೆ ಈ ಪ್ರಕರಣ ಬೇಧಿಸಲಾಗಿದೆ ಎಂದರು.

ದೂರಿನ ಮೇರೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಹಾದೇವ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಸೋಮವಾರ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯ ಹಾಗೂ ಹಾಗೂ ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸುಮಾರು 5 ಲಕ್ಷ ರೂ. ಮೌಲ್ಯದ ಪ್ರಮುಖ ಬ್ರಾಂಡ್‌ಗಳ ಹೆಸರನ್ನು ಹೊಂದಿರುವ, ನಕಲಿ ಫುಟ್‌ಬಾಲ್‌ಗಳು, ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ರಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದ್ದು ಪ್ರಾಥಮಿಕ ತನಿಖೆಯಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿ ಈ ನಕಲಿ ಸಾಮಗ್ರಿಗಳ ಉತ್ಪಾದನಾ ಸಂಸ್ಥೆ ಹಾಗೂ ಮಾರಾಟ ನಡೆಯುತ್ತಿರುವುದು ತಿಳಿದು ಬಂದಿದೆ ಎಂದರು.

ಅಸಲಿ- ನಕಲಿ ಗುರುತಿಸುವುದು ಕಷ್ಟ

ಸಾಮಾನ್ಯ ಗ್ರಾಹಕರು ಬ್ರಾಂಡೆಡ್ ಕಂಪನಿಗಳ ವಸ್ತುಗಳ ನಕಲಿಯನ್ನು ಗುರುತಿಸುವುದು ಕಷ್ಟಕರ. ದರದಲ್ಲಿಯೂ ವ್ಯತ್ಯಾಸವಿರುವುದಿಲ್ಲ. ಸಾಮಾನ್ಯವಾಗಿ ಬ್ರಾಂಡ್ ಸಂಸ್ಥೆಯ ವಾಲಿಬಾಲ್ ಬೆಲೆ 1680 ರೂ. ಎಂದು ನಮೂದಿಸ ಲಾಗಿದೆ. ನಕಲಿಯಲ್ಲಿಯೂ ಅದೇ ರೀತಿಯ ದರ ಇರುತ್ತದೆ. ಕೆಲವೆಡೆ ಶೇ. 20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಸಲಿ ವಸ್ತುಗಳ ಬಣ್ಣ, ಹೋಲೋಗ್ರಾಂ, ಎಂಬೋಸ್ ಆಗಿರುವ ಬ್ಯಾಚ್ ನಂಬರ್‌ಗಳಿಂದ ಗುರುತಿಸಬಹುದು. ಅಸಲಿ ವಸ್ತುಗಳಲ್ಲಿ ತ್ರಿಡಿಯಲ್ಲಿ ಹೋಲೋ ಗ್ರಾಂ ಮುದ್ರಣವಾಗಿರುತ್ತದೆ. ಬಣ್ಣವೂ ಕಡುವಾಗಿದ್ದು, ಸಾಮಗ್ರಿಗಳ ಬ್ಯಾಚ್ ನಂಬರ್ ಎಂಬೋಸ್ ಮಾಡಲಾಗಿರು ತ್ತದೆ. ನಕಲಿಯಲ್ಲಿ ಹೋಲೋ ಗ್ರಾಂ 2ಡಿಯಲ್ಲಿರುತ್ತದೆ. ಬಣ್ಣ ತಿಳಿಯಾಗಿದ್ದು, ಸಾಮಗ್ರಿಗಳ ಎಂಬೋಸ್ಡ್ ಬ್ಯಾಚ್ ನಂಬರ್ ಇರುವುದಿಲ್ಲ. ಈ ರೀತಿಯಾಗಿ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಲ್ಲಿ, ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಗ್ರಾಹಕರಿಗೆ ಆಗುವ ವಂಚನೆಯನ್ನು ತಪ್ಪಿಸಲಾಗುವುದು ಎಂದು ಡಿಸಿಪಿ ಮಿಥುನ್ ತಿಳಿಸಿದರು.

ಗೋಷ್ಟಿಯಲ್ಲಿ ಡಿಸಿಪಿ ರವಿಶಂಕರ್, ಎಸಿಪಿಗಳಾದ ಪ್ರತಾಪ್ ಸಿಂಗ್ ತೋರಟ್, ವಿಜಯಕ್ರಾಂತಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News