ರಿಷಿಕಾ ಕುಂದೇಶ್ವರಗೆ ಡ್ರಾಮಾ ಜೂನಿಯರ್ಸ್ ಪಟ್ಟ: ಸ್ಪೀಕರ್ ಯು.ಟಿ.ಖಾದರ್, ಶಾಸಕರು, ಸಂಸದರಿಂದ ಅಭಿನಂದನೆ

Update: 2024-04-27 17:46 GMT

ಮಂಗಳೂರು: ಝೀ ಕನ್ನಡದ ಡ್ರಾಮಾ ಜೂನಿಯರ್ಸ್ ಸೀಸನ್ 5ರ ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಇತ್ತೀಚೆಗೆ ಟ್ರೋಫಿ ಗೆದ್ದುಕೊಂಡಿದ್ದು ಅವರನ್ನು ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವಿ.ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಮಾಜಿ ಶಾಸಕ ರಘುಪತಿ ಭಟ್ ಮತ್ತು ಸಿನಿ, ರಂಗಭೂಮಿ ಕಲಾವಿದರು ಜಾಲತಾಣದಲ್ಲಿ ಅಭಿನಂದಿಸಿ ಪೋಸ್ಟ್ ಗಳನ್ನು ಹಾಕಿದ್ದಾರೆ.

ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿ ನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ ಗಳೊಂದಿಗೆ ರಿಷಿಕಾ ಫೈನಲ್‌ಗೆ ಲಗ್ಗೆ ಹಾಕಿದ್ದರು.

ರಿಷಿಕಾ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ. ಮೂಲತಃ ಕಾರ್ಕಳ ಕುಂದೇಶ್ವರದ ರಿಷಿಕಾ, ಮಂಗಳೂರು ಅಶೋಕನಗರ ಎಸ್ಡಿಎಂ ಸ್ಕೂಲ್ ವಿದ್ಯಾರ್ಥಿನಿ. ಬಾಲಯಕ್ಷಕೂಟ, ಯಕ್ಷಮಾಧ್ಯಮ ತಂಡದ ಸದಸ್ಯೆ.

31 ಜಿಲ್ಲೆಗಳಿಂದ ಸಹಸ್ರಾರು ಬಾಲ ಪ್ರತಿಭೆಗಳ ಶೋಧ ನಡೆಸಿ ಮೇಗಾ ಅಡಿಶನ್‌ನಲ್ಲಿ 24 ಮಕ್ಕಳನ್ನು ಆಯ್ಕೆ ಮಾಡಲಾ ಗಿತ್ತು. 22 ವಾರದಲ್ಲಿ 24 ಮಕ್ಕಳು ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು.

ಮೊದಲ ವಿಜೇತರಾದ ರಿಷಿಕಾ ಮತ್ತು ವಿಷ್ಣು ಕುಣಿಗಲ್‌ಗೆ 30X40 ಸೈಟ್ ಬಹುಮಾನವಾಗಿ ಬಂದರೆ, ಮೊದಲ ರನ್ನರ್ ಅಪ್ ಶಿವಮೊಗ್ಗದ ಮಹಾಲಕ್ಷ್ಮೀ ಗೆ 3 ಲಕ್ಷ ರೂ. ನಗದು, ಎರಡನೇ ರನ್ನರ್ ಅಪ್ ಭದ್ರಾವತಿಯ ಇಂಚರಗೆ 1 ಲಕ್ಷ ರೂ. ಬಹುಮಾನ ನೀಡಲಾಗಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ತೀರ್ಪುಗಾರರಾಗಿ ವೇದಿಕೆ ಮೇಲಿದ್ದರು.

ಯಕ್ಷಗಾನ, ಯಕ್ಷರೂಪಕ, ನಾಟಕಗಳಲ್ಲಿ ಅಭಿನಯಿಸುವ ರಿಷಿಕಾ, ಕೃಷ್ಣರಾಜ ನಂದಳಿಕೆ ಅವರಿಂದ ಕರ್ನಾಟಕ್ ಸಂಗೀತ, ಎಲ್ಲೂರು ರಾಮಚಂದ್ರ ಭಟ್ ಅವರಲ್ಲಿ ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾಳೆ.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News