×
Ad

ಮಂಗಳೂರು: ಕುದ್ಮುಲ್ ರಂಗರಾವ್ ಜನ್ಮ ಜಯಂತಿ ಆಚರಣೆ

Update: 2025-06-29 15:50 IST

ಮಂಗಳೂರು. ಜೂ.29: ತನ್ನ ಬದುಕನ್ನು ದೀನದಲಿತರ ಸೇವೆಗೆ ಮುಡಿಪಾಗಿರಿಸಿದ್ದ ಕುದ್ಮುಲ್ ರಂಗರಾವ್ ಅವರ ಸಾಧನೆಯು ಮಹಾತ್ಮ ಗಾಂದೀಜಿಗೆ ಪ್ರೇರಣೆಯಾಗಿತ್ತು ಎಂದು ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.

ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಕುದ್ಮುಲ್ ರಂಗರಾವ್ ರ 166ನೇ ಜನ್ಮ ಜಯಂತಿಯ ಪ್ರಯುಕ್ತ ರವಿವಾರ ನಗರದ ಅತ್ತಾವರ ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಸಮಾಧಿಯ ಬಳಿ ಗೌರವ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಮಹಾತ್ಮಾ ಗಾಂಧಿಯು 1934ರ ಫೆ.24ರಂದು ಮಂಗಳೂರನ್ನು ಸಂದರ್ಶಿಸಿದಾಗ ಶೇಡಿಗುಡ್ಡೆಯಲ್ಲಿ ಕುದ್ಮುಲ್ ರಂಗರಾಯರು ಸ್ಥಾಪಿಸಿದ್ದ ಡಿಪ್ರೆಸ್ಟ್ ಕ್ಲಾಸ್ ಮಿಷನ್ ಸಂಸ್ಥೆಗೆ ಭೇಟಿ ಕೊಟ್ಟರು. ಆಗ ರಂಗರಾಯರು ನಿಧನರಾಗಿ ಆರು ವರ್ಷ ಕಳೆದಿತ್ತು. ಗಾಂಧೀಜಿ ಆ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶಾಲಾ ಮಕ್ಕಳು ರಚಿಸಿದ ಕರಕುಶಲ ವಸ್ತುಗಳನ್ನು ಮತ್ತು ಅಂದವಾದ ಹೂದೋಟವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಾರ್ವಜನಿಕ ಭಾಷಣದಲ್ಲಿ ಗಾಂಧೀಜಿ ದಲಿತ ಉದ್ಧಾರಕ ಕುದ್ಮುಲ್ ರಂಗರಾಯರನ್ನು ತನ್ನ ಗುರು ಎಂದು ಘೋಷಿಸಿ ಅವರ ಸಮಾಜಮುಖಿ ಕೆಲಸಗಳಿಂದ ತಾನು ಪ್ರಭಾವಿತನಾದೆ ಎಂದು ಸಾರಿರುವುದು ಗಮನಾರ್ಹ ಎಂದರು.

ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಾಮಾಜಿಕ ಕಾರ್ಯಕರ್ತ ವಾದಿರಾಜ, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಹೃದಯನಾಥ್, ಮಾಜಿ ಮೇಯರ್ ಮನೋಜ್ ಕೋಡಿಕಲ್, ಪಾಲಿಕೆಯ ಮಾಜಿ ಸದಸ್ಯರಾದ ಸಂದೀಪ್ ಗರೋಡಿ, ಶೈಲೇಶ್, ಭರತ್, ಉಪನ್ಯಾಸಕ ಪುಟ್ಟಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News