ಕಂಬಳಪದವು: ನೂತನ ಅಗ್ನಿಶಾಮಕ ಠಾಣೆಗೆ ಗೃಹಸಚಿವರಿಂದ ಶಿಲಾನ್ಯಾಸ
ಕೊಣಾಜೆ: ಉಳ್ಳಾಲ ತಾಲೂಕಿನ ಕಂಬಳಪದವು ಬಳಿ ನೂತನ ಅಗ್ನಿಶಾಮಕ ಠಾಣೆಗೆ ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಬುಧವಾರ ಶಿಲಾನ್ಯಾಸವನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಂದು ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ನ ಯೋಜನೆ ಇದೆ. ಹಂತ ಹಂತವಾಗಿ ಮಂಜೂರುಗೊಳಿಸಲಿದ್ದೇವೆ. ಕಡಬ ಮತ್ತು ಮುಲ್ಕಿಯಲ್ಲಿ ಅನುದಾನ ಮಂಜೂರುಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಉಳ್ಳಾಲ ತಾಲೂಕು ಆಗಿ ಘೋಷಣೆ ಅದ ಬಳಿಕ ವಿವಿಧ ಇಲಾಖೆಗಳ ಶಾಖೆ ಹಂತ ಹಂತವಾಗಿ ಬರುತ್ತಿದೆ ಎಂದರು.
ಮುಂದೆಯೂ ಅಗತ್ಯ ಕಾಮಗಾರಿಗೆ ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ ಖಾದರ್, ರಾಜ್ಯಕ್ಕೆ ಮಾದರಿ ಅಗ್ನಿಶಾಮಕ ಕಚೇರಿ ಉಳ್ಳಾಲದಲ್ಲಿ ನಿರ್ಮಾಣ ಮಾಡಲಾಗುವುದು. ಮಂಗಳೂರು ಉಳ್ಳಾಲಕ್ಕೆ ಕೇಂದ್ರ ಸ್ಥಾನದಲ್ಲಿ ಈ ಅಗ್ನಿ ಶಾಮಕ ಕಚೇರಿ ನಿರ್ಮಾಣ ಆಗುತ್ತಿದೆ. ಮುಂದೆ ಉಳ್ಳಾಲ ಕೊಣಾಜೆ ಪೊಲೀಸ್ ಠಾಣೆ ಮಾದರಿ ಆಗಿ ನಿರ್ಮಾಣ ಮಾಡುವ ಗುರಿ ಇದೆ ಎಂದು ಅವರು ಹೇಳಿದರು.
ಅಗ್ನಿಶಾಮಕ ಇಲಾಖೆಯ ಉಪ ನಿರ್ದೇಶಕ ಈಶ್ವರ ನಾಯಕ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಪಜೀರು ಪಂಚಾಯತ್ ಅಧ್ಯಕ್ಷ ರಫೀಕ್ ಪಜೀರು, ಮುನ್ನೂರು ಪಂಚಾಯತ್ ಅಧ್ಯಕ್ಷೆ ರೆಹನಾ ಬಾನು, ಮಂಜನಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ದಾಮೋದರ್ ಕುಂದರ್, ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಗೀತಾ ಭಂಡಾರಿ, ಕುರ್ನಾಡು ಗ್ರಾಪಂ ಅಧ್ಯಕ್ಷೆ ಪ್ರೇಮಾ ಗಟ್ಟಿ, ಕುರ್ನಾಡು ಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೆರ, ರಮೇಶ್ ಶೆಟ್ಟಿ, ಮುಖಂಡರಾದ ಸೀತಾರಾಂ ಶೆಟ್ಟಿ ಪೆರ್ನ, ಜೆ.ಬಾವ, ಕಣಚೂರು ಮೋನು, ಹರ್ಷರಾಜ್ ಮುದ್ಯ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.