ನಿಟ್ಟೆ: ವಿನಯ ಹೆಗ್ಡೆಗೆ ಹುಟ್ಟೂರ ನುಡಿ ನಮನ ಕಾರ್ಯಕ್ರಮ
ಕಾರ್ಕಳ: ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಿಧನರಾದ ವಿನಯ ಹೆಗ್ಡೆ ಅವರಿಗೆ ನುಡಿನಮನ ಕಾರ್ಯಕ್ರಮ ಬುಧವಾರ ನಡೆಯಿತು.
ನಿಟ್ಟೆ ಗ್ರಾಮದಲ್ಲಿ ಶೈಕ್ಷಣಿಕ, ವೈದ್ಯಕೀಯ ಹಾಗೂ ಔದ್ಯೋಗಿಕ ಕ್ರಾಂತಿ ನಡೆಸಿ ನಿಟ್ಟೆ ಗ್ರಾಮದ ಹೆಸರನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವಿನಯ ಹೆಗ್ಡೆಯವರ ಸಾಧನೆಗಳನ್ನು ನಿಟ್ಟೆ ಕೆಮ್ಮಣ್ಣು ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಪ್ರಸನ್ನ ಆಚಾರ್ಯ, ಕಾರ್ಕಳ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ, ನಿಟ್ಟೆ ವಿದ್ಯಾಸಂಸ್ಥೆಯ ಹಿರಿಯ ಅಧಿಕಾರಿ ಯೋಗೀಶ್ ಹೆಗ್ಡೆ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಸ್ಮರಿಸಿ ವಿನಯ ಹೆಗ್ಡೆಯವರು ಗ್ರಾಮದ ಜನತೆಯ ಆಶ್ರಯದಾತರಾ ಗಿದ್ದರು ಎಂದು ನುಡಿನಮನ ಸಲ್ಲಿಸಿದರು.
ವಿನಯ ಹೆಗ್ಡೆ ಅವರ ಪುತ್ರ ವಿಶಾಲ ಹೆಗ್ಡೆ ಅವರು ಮಾತನಾಡಿ ನಿಟ್ಟೆ ಗ್ರಾಮಸ್ಥರೊಂದಿಗೆ ತನ್ನ ತಂದೆಗೆ ಇದ್ದ ಪ್ರೀತಿ ಮತ್ತು ಅಭಿಮಾನಗಳ ಪ್ರತೀಕವಾಗಿ ನಿಟ್ಟೆಯ ಗ್ರಾಮಸ್ಥರು ಸೇರಿ ಸಲ್ಲಿಸಿದ ನುಡಿನಮನ ವಿನಯ ಹೆಗ್ಡೆಯವರ ಆತ್ಮಕ್ಕೆ ತೃಪ್ತಿ ನೀಡಲಿದೆ ಎಂದರು.
ವಿನಯ ಹೆಗ್ಡೆಯವರ ಮೊಮ್ಮಗ ವಿರೇನ್ ಉಪಸ್ಥಿತರಿದ್ದರು. ನಿಟ್ಟೆ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ವಿನಯ ಹೆಗ್ಡೆಯವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಅರವಿಂದ ಕುಮಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.