ಡಿ.23ರಂದು ದಲಿತರಿಂದ ‘ನಮ್ಮ ಭೂಮಿ ನಮ್ಮ ಹಕ್ಕು’ ; ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಜಾಥಾ-ಸಮಾವೇಶ : ಎಂ.ಬಿ.ಕರಿಯ
ಮಂಗಳೂರು, ಡಿ.20: ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ದಲಿತರಶಿಕ್ಷಣ ಮತ್ತು ಭೂ ಹಕ್ಕೊತ್ತಾಯ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಡಿ. 23ರಂದು ದಲಿತರಿಂದ ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಎಂ.ಬಿ.ಕರಿಯ ಧರ್ಮಸ್ಥಳ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾಥಾ ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ಅಯ್ಯಪ್ಪ ಗುಡಿಯ ಬಳಿಯಿಂದ ಹೊರಡಲಿದ್ದು, ಬಳಿಕ ಸಿವಿಸಿ ಹಾಲ್‌ನಲ್ಲಿ ಸಮಾವೇಶ ನಡೆಯಲಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿ ಕುಟುಂಬಕ್ಕೆ ಲಭ್ಯ ಇರುವ ಸರಕಾರಿ ಭೂಮಿಯಲ್ಲಿ ಕನಿಷ್ಟ ಒಂದು ಎಕರೆ ಭೂಮಿ ನೀಡಬೇಕು. ಭೂ ಅಭಿವೃದ್ಧಿಗೆ ಹೆಚ್ಚಿನ ಸೌಲಭ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋದಕ ಮತ್ತು ಬೋದಕೇತರ ಸಿಬ್ಬಂದಿ ಪೈಕಿ ಶೇ.20ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ನೇಮಕ ಮಾಡಬೇಕು. ದಲಿತರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಈ ಹಕ್ಕೊತ್ತಾಯ ಜಾಥಾ ಹಾಗೂ ಸಮಾವೇಶ ನಡೆಯಲಿದೆ ಎಂದರು.
ದಲಿತರ 14 ಹಕ್ಕೊತ್ತಾಯಗಳ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ. ನರೇಂದ್ರ ನಾಯಕ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್, ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ ರಾಜಗೋಪಾಲ್, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ಕೋಲಾರ ಅಧ್ಯಕ್ಷ ಸಂದೇಶ್ ಕೆ.ಎಂ., ಚಲನಚಿತ್ರ ನಿರ್ದೇಶಕ ಹಾಗೂ ಸಾಮಾಜಿಕ ಹೋರಟಾಗರ ಟೈಗರ್ ನಾಗ್, ಪ್ರೊಕೃಷ್ಣಪ್ಪ ಸ್ವಾಭಿಮಾನ ಬಳಗದ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್, ಡಿಎಸ್‌ಎಸ್ ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕ ಆರ್.ರಮೇಶ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಲಿದ್ದಾರೆ ಎಂದವರು ಹೇಳಿದರು.
ನಾಗರಿಕ ಸೇವಾ ಟ್ರಸ್ಟ್‌ನ ಸಂಚಾಲಕರಾದ ಕೆ. ಸೋಮನಾಥ ನಾಯಕ್ ಮಾತನಾಡಿ, ಮಾಹಿತಿ ಹಕ್ಕಿನಲ್ಲಿ ಕೊಕ್ಕಡ, ಬೆಳ್ತಂಗಡಿ, ವೇಣೂರು ಮೂರು ಫಿರ್ಕಾದ ಕಂದಾಯ ನಿರೀಕ್ಷರು ನೀಡಿದ ಮಾಹಿತಿ ಪ್ರಕಾರ 81 ಗ್ರಾಮಗಳಲ್ಲಿ ಒಟ್ಟು 1,43,191.01 ಎಕರೆ ಸರಕಾರಿ ಭೂಮಿಯಲ್ಲಿ ಕುಮ್ಕಿ, ಡೀಮ್ಡ್ ಫಾರೆಸ್ಟ್, ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಿದ 94 ಸಿ ಮತ್ತು ನಮೂನೆ 57,53, ಸಾಗುವಳಿ ಜಮೀನು ಇತ್ಯಾದಿ ಸುಮಾರು 7ರಿಂದ 10 ಸಾವಿರ ಎಕರೆ ಭೂಮಿ ಲಭ್ಯ ಇರುವುದಾಗಿ ಅಂದಾಜಿಸಲಾಗಿದೆ. ನಾಗರಿಕ ಸೇವಾ ಟ್ರಸ್ಟ್ 2004ರಲ್ಲಿ ಮಾಡಿದ ದಲಿತರ ಸ್ಥಿತಿಗತಿ ಅಧ್ಯಯನ ಪ್ರಕಾರ ಬೆಳ್ತಂಗಡಿ ತಾಲೂಕಿನ ದಲಿತರು ತುಂಡು ಭೂಮಿ ಹೊಂದಿದ್ದು, ಎಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ಬೆಳ್ತಂಗಡಿ ತಹಶೀಲ್ದಾರರು ಪ್ರತಿ ವರ್ಷ ಸರಕಾರಿ ಭೂಮಿ ಲಭ್ಯ ಇಲ್ಲ ಎಂದು ಪ್ರಕಟನೆ ಹೊರಡಿಸುತ್ತಾರೆ. ಧರ್ಮಸ್ಥಳ ಗ್ರಾಮದಲ್ಲಿಯೇ 400 ಎಕರೆಗೂ ಅಧಿಕ ಸರಕಾರಿ ಭೂಮಿ ಇದ್ದು, ಭಾಗಶ: ಭೂ ಮಾಲಕರಿಂದ ಅತಿಕ್ರಮಣವಾಗಿದೆ. ಕೆಲವೊಂದು ಸರಕಾರಿ ಭೂಮಿ ನೀಡಲಾದ ಉದ್ದೇಶಕ್ಕೆ ಬಳಕೆಯಾಗಿಲ್ಲ. ಅತಿಕ್ರಮಣ ಹಾಗೂ ಉದ್ದೇಶ ಈಡೇರದ ಭೂಮಿಯನ್ನು ವಾಪಾಸು ಪಡೆದು ಸುತ್ತಮುತ್ತಲಿನ ಗ್ರಾಮಗಳ ದಲಿತರಿಗೆ ಹಂಚಬೇಕು. ಇದಕ್ಕಾಗಿ ಬೆಳ್ತಂಗಡಿಯಲ್ಲಿ ಸಮಗ್ರ ಸರಕಾರಿ ಭೂಮಿಯ ಸಮೀಕ್ಷೆ ನಡೆಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿರುವ 473 ಎಕರೆ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು.
ಸಹ ಸಂಚಾಲಕ ಸುಕೇಶ್ ಮಾಲಾಡಿ ಮಾತನಾಡಿ, ಉಜಿರೆಯ ಕಾಲೇಜಿಗೆ ಮತ್ತು ನಾಲ್ಕು ಹೈಸ್ಕೂಲ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನಿಯಮ ಪ್ರಕಾರ ಶೇ.20ರಷ್ಟು ಬೋದಕ ಮತ್ತು ಬೋದಕೇತರ ಸಿಬ್ಬಂದಿ ನೇಮಕ ಮಾಡಿಲ್ಲ. ಈ ಬಗ್ಗೆ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಗೋಷ್ಟಿಯಲ್ಲಿ ಸಹ ಸಂಚಾಲಕರಾದ ಬಾಬ ಎ., ನಾರಾಯಣ ಕಿಲಂಗೋಡಿ ಉಪಸ್ಥಿತರಿದ್ದರು.