×
Ad

ಹಳೆ ಬಂದರಿನಲ್ಲಿ ಡ್ರೈನೇಜ್ ಅವ್ಯವಸ್ಥೆ, ರಸ್ತೆ ದುರವಸ್ಥೆ ಖಂಡಿಸಿ ಪ್ರತಿಭಟನೆ

Update: 2025-08-07 20:12 IST

ಮಂಗಳೂರು, ಆ.7: ನಗರದ ಹಳೆ ಬಂದರಿನಲ್ಲಿ ಡ್ರೈನೇಜ್ ಅವ್ಯವಸ್ಥೆ, ರಸ್ತೆ ದುರವಸ್ಥೆ ಖಂಡಿಸಿ ಡಿವೈಎಫ್‌ಐ ಬಂದರು ಘಟಕ ಮತ್ತು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ಗುರುವಾರ ಪ್ರತಿಭಟನೆ ನಡೆಯಿತು.

ಬಂದರು ಶ್ರಮಿಕರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ನಗರದ ಆರ್ಥಿಕತೆಗೆ ಸಾಕ್ಷಿ ಯಾಗಿದ್ದ ಹಳೆ ಬಂದರು ಸಗಟು ಮಾರುಕಟ್ಟೆಯ ಪರಿಸರ ಅನೇಕ ಮೂಲಭೂತ ಸಮಸ್ಯೆಯಿಂದ ಕೂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮೊದಲು ಅಭಿವೃದ್ಧಿ ಆಗಬೇಕಾದ ಪ್ರದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಸ್ಮಾರ್ಟ್ ಸಿಟಿಯು ಮೀನುಗಾರಿಕಾ ಪ್ರದೇಶಾಭಿವೃದ್ಧಿ ಆಧಾರಿತ ಯೋಜನೆಯಾಗಿದ್ದರೂ ಬಂದರು ಪ್ರದೇಶದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ವೈಫಲ್ಯ ಕಂಡಿದೆ ಎಂದು ಟೀಕಿಸಿದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ ಬಂದರು ವಾರ್ಡಿನ ಗೋಲಿಕಟ್ಟೆ ಬಜಾರಿನಿಂದ ಪೋರ್ಟ್‌ವರೆಗಿನ ರಸ್ತೆಯಲ್ಲಿ ಹಾದುಹೋಗುವ ಡ್ರೈನೇಜ್ ಮ್ಯಾನ್‌ಹೋಲ್‌ಗಳು ತುಂಬಿ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ಪಾದಚಾರಿಗಳು ನಡೆದಾಡಲು ಕಷ್ಟ ಪಡುತ್ತಿದ್ದಾರೆ. ಶಾಲಾ ಮಕ್ಕಳು, ನಗರಕ್ಕೆ ಕೆಲಸಕ್ಕೆ ಹೋಗುವ ಮಹಿಳೆಯರು, ಬಂದರು ಸಗಟು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತ್ಯಾಜ್ಯ ನೀರಿನಲ್ಲೇ ನಡೆದಾಡುವ ಕೆಟ್ಟ ಪರಿಸ್ಥಿತಿ ಇದೆ ಎಂದರಲ್ಲದೆ, ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಪಾಲಿಕೆಗೆ ಕೈಗಾಡಿ ಜಾಥಾ ಆಯೋಜಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನರೇಶ್ ಶೆಣೈ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಡಿವೈಎಫ್‌ಐ ಮುಖಂಡರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಪಿ.ಜಿ. ರಫೀಕ್, ಹನೀಫ್ ಬೆಂಗ್ರೆ, ಬಂದರು ಘಟಕದ ಪ್ರಮುಖರಾದ ನೌಫಲ್ ಬಂದರ್, ಶಫೀರ್, ನೌಷಾದ್, ರಿಫಾಝ್, ಆಫ್ರಾಝ್, ಶಫೀಕ್, ರಿಹಾನ್, ಬಂದರು ಶ್ರಮಿಕರ ಸಂಘದ ನಾಯಕರಾದ ಫಾರೂಕ್ ಉಳ್ಳಾಲಬೈಲ್, ಶಿವಾನಂದ ಪೆರುಮಾಲ್, ಲೋಕೇಶ್ ಶೆಟ್ಟಿ, ಹರೀಶ್ ಕೆರೆಬೈಲ್, ಸಿದ್ದಿಕ್ ಬೆಂಗರೆ, ರಫೀಕ್, ಮಜೀದ್ ಉಳ್ಳಾಲ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News