×
Ad

ತುಳುನಾಡಿನ ಜಾನಪದ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಶ್ರೇಷ್ಠ ನಿರ್ಧಾರ : ಡಾ.ಗಣನಾಥ ಎಕ್ಕಾರ್

ತುಳು ಭವನದಲ್ಲಿ ಸಿಂಧೂ ಗುಜರನ್ ಮತ್ತು ಉಮೇಶ್ ಪಂಬದ ಅವರಿಗೆ ಅಭಿನಂದನೆ ಸಮರ್ಪಣೆ

Update: 2025-11-09 00:05 IST

ಮಂಗಳೂರು: ಜಾನಪದ ಕಲಾವಿದರು ಯಾವುದೇ ಪ್ರತಿಫಲವನ್ನು ಬಯಸದೇ ಸೇವಾ ನಿರತರಾಗಿರುತ್ತಾರೆ, ತುಳುನಾಡಿನ ಇಬ್ಬರು ಹಿರಿಯ ಕಲಾವಿದರಾದ ಸಿಂಧೂ ಗುಜರನ್ ಹಾಗೂ ಉಮೇಶ್ ಪಂಬದ ಗಂಧಕಾಡು ಅವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೂಲಕ ಗುರುತಿಸಿದ ರಾಜ್ಯ ಸರಕಾರದ ನಡೆ ಶ್ಲಾಘನೀಯವಾದದ್ದು ಎಂದು ಜಾನಪದ ವಿದ್ವಾಂಸ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ನ ನಿರ್ದೇಶಕ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಹೇಳಿದ್ದಾರೆೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸಹಭಾಗಿತ್ವದಲ್ಲಿ ತುಳು ಭವನದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತದೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸಲ್ಲಿಸಿ ಮಾತನಾಡಿದರು.

ತುಳುವಿನ ಪಾಡ್ದನವು ಜಾನಪದ ಮಹಾಕಾವ್ಯವಾಗಿದ್ದು, ಪಾಡ್ದನ ಹೇಳುವುದಲ್ಲ ಅದು ಕಟ್ಟುವುದು ,ಪಾಡ್ದನ ಕಟ್ಟುವ ಕಲೆಗೆ ಅದರದ್ದೇ ಆದ ವಿಶಿಷ್ಟ ಚೌಕಟ್ಟು ಹಾಗೂ ಸ್ವರೂಪವಿದೆ, ಆ ಕಾರಣಕ್ಕಾಗಿ ಪಾಡ್ದನ ಕಲಾವಿದರು ಸ್ವತಂತ್ರ ಕವಿಗಳೇ ಆಗಿರುತ್ತಾರೆ. ಪಾಡ್ದನ ಕವಿಗಳ ದಾಖಲೀಕರಣ ನಡೆಯಬೇಕಾಗಿದೆ ಎಂದು ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಹೇಳಿದರು.

ದೈವಾರಧನೆಯೂ ತುಳು ನಾಡಿನ ಆರಾಧನಾ ಶಕ್ತಿಯ ಮೂಲಸೆಲೆಯಾಗಿದ್ದು, ಉಮೇಶ್ ಪಂಬದ ಅವರಂತ ನೂರಾರು ದೈವಾರಾಧಕರು ಶತಮಾನಗಳಿಂದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇವತ್ತು ತುಳುನಾಡಿನ ಭೂತಾರಾಧನೆ ಪಡೆದಿರುವ ಜನಪ್ರಿಯತೆಯ ಹಿಂದೆ ಶತಮಾನಗಳ ಶ್ರದ್ಧೆಯ ಹಾಗೂ ಬದ್ಧತೆಯ ಫಲ ಇದೆ ಎಂದು ಗಣನಾಥ ಶೆಟ್ಟಿ ಅವರು ಉಲ್ಲೇಖಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿಂಧೂ ಗುಜರನ್ ಹಾಗೂ ಉಮೇಶ್ ಪಂಬದ ಅವರ ಜೊತೆಗೆ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅವರು ಸಂವಾದ ನಡೆಸಿಕೊಟ್ಟರು.

ಉಮೇಶ್ ಕೊಂಬದ ಅವರು ಮಾತನಾಡಿ, ನಿಷ್ಠೆ ಹಾಗೂ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಸರಕಾರ ಗುರುತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಿಂಧೂ ಗುಜರನ್ ಅವರು ತೆಂಬರೆ ನುಡಿಸಿ ಪಾಡ್ದನ ಪ್ರಸ್ತುತಪಡಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಅವರು ಶುಭಕೋರಿ ಮಾತನಾಡಿದರು.

ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News