ಎಸ್‌ಐಟಿ ವರದಿ ಶೀಘ್ರದಲ್ಲೇ ಸರಕಾರಕ್ಕೆ : ಡಿ.ಕೆ. ಶಿವಕುಮಾರ್
ಮಂಗಳೂರು, ಆ.30: ಧರ್ಮಸ್ಥಳ ಪ್ರಕರಣದ ತನಿಖೆಗೆ ನಿಯೋಜಿಸಲಾದ ವಿಶೇಷ ತನಿಖಾ ತಂಡ(ಎಸ್‌ಐಟಿ) ನಡೆಸುತ್ತಿರುವ ತನಿಖೆ ಬಗ್ಗೆ ಏನನ್ನು ಹೇಳಲು ಬಯಸುವುದಿಲ್ಲ. ಶೀಘ್ರದಲ್ಲೇ ಎಸ್‌ಐಟಿ ತನಿಖಾ ವರದಿ ಸರಕಾರದ ಕೈ ಸೇರಲಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಉಡುಪಿಯ ಕಾರ್ಯಕ್ರಮದಲ್ಲಿ ತೆರಳಲು ವಿಮಾನದಲ್ಲಿ ಶನಿವಾರ ಮಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್‌ಐಟಿ ತನಿಖೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ರಾಜ್ಯದ ಹಲವಡೆ ಹಬ್ಬದ ಆಚರಣೆ ವೇಳೆ ಡಿಜೆಗೆ ನಿಷೇಧ ಹೇರಿರುವ ವಿಚಾರದ ಬಗ್ಗೆ ಸಚಿವರಲ್ಲಿ ಕೇಳಿದಾಗ ಜಿಲ್ಲಾಡಳಿತ ಕೈಗೊಂಡಿರುವ ಈ ನಿರ್ಧಾರದಲ್ಲಿ ಮಧ್ಯೆಪ್ರವೇಶಿಸಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಣಪತಿ ಹಬ್ಬದ ವೇಳೆ ಬಹುತೇಕ ಕಡೆ ಡಿಜೆಯನ್ನು ನಿಷೇಧಿಸಲಾಗಿದೆ ಎಂಬ ವಿಚಾರ ಪೊಲೀಸ್ ಆಯುಕ್ತರು ನೀಡಿರುವ ಹೇಳಿಕೆಯಿಂದ ಗೊತ್ತಾಯಿತು. ಸ್ಥಳೀಯಾಡಳಿತ ಕೈಗೊಂಡಿರುವ ಕೆಲವು ಸಣ್ಣಪುಟ್ಟ ನಿರ್ಧಾರಗಳಲ್ಲಿ ಸರಕಾರ ಮಧ್ಯೆಪ್ರವೇಶ ಮಾಡದು ಎಂದರು.
ಡಿಜೆ ನಿಷೇಧದಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಅವರನ್ನೇ ಭೇಟಿಯಾಗಲಿ ಎಂದು ಉತ್ತರಿಸಿದರು.