ಕ್ರೀಡಾಕೂಟದಿಂದ ಸಾಮರಸ್ಯತೆ ಬೆಳೆಯಲು ಸಾಧ್ಯ: ಎ.ಸಿ.ಭಂಡಾರಿ
ಮುಡಿಪುವಿನಲ್ಲಿ "ಮಹಾನಾಯಕ ಜೈ ಭೀಮ್ ಟ್ರೋಫಿ" -2026 ಉದ್ಘಾಟನೆ
ಕೊಣಾಜೆ: ಕ್ರೀಡೆಯಿಂದ ಸಮಾಜದಲ್ಲಿ ಪರಸ್ಪರ ಒಗ್ಗಟ್ಟು , ಸೌಹಾರ್ದತೆ, ಸಾಮರಸ್ಯತೆ ಬೆಳೆಯಲು ಸಾಧ್ಯವಾಗು ತ್ತದೆ. ಆಧುನಿಕತೆಯ ನಡುವೆ ಕ್ರೀಡೆಯಿಂದ ದೂರವಾಗದೆ ಇಂತಹ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿದ್ದುಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಎ.ಸಿ. ಭಂಡಾರಿ ಹೇಳಿದರು.
ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ, ಉಳ್ಳಾಲ ತಾಲೂಕು ಕ್ರೀಡಾ ಮತ್ತು ಸಾಂಸ್ಕೃತಿಕ ಘಟಕದಿಂದ ಪರಿಶಿಷ್ಟ ಜಾತಿ, ಪಂಗಡದ ಸಮಾಜ ಬಾಂಧವರಿಗೆ ಹಮ್ಮಿಕೊಳ್ಳಲಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಮಾದರಿಯ ನಾಲ್ಕು ದಿನಗಳ ಪಂದ್ಯಾ ಕೂಟ ಉಳ್ಳಾಲ ವಿದಾನಸಭಾ ಕ್ಷೇತ್ರದ ಬಾಳೆಪುಣಿ ರಾಜೀವ್ ಗಾಂಧಿ ಪಂಚಾಯಿತಿ ಮೈದಾನದಲ್ಲಿ ಶುಕ್ರವಾರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಜಿ.ಪಂ. ಸದಸ್ಯನಾಗಿದ್ದ ಸಂದರ್ಭ ಸ್ಥಳೀಯ ಯುವಕರ ಕ್ರೀಡೆಗೆ ಮೈದಾನ ಇಲ್ಲದ್ದನ್ನು ಗಮನಿಸಿ ಬಾಳೆಪುಣಿಯಲ್ಲಿ ಮೈದಾನ ನಿರ್ಮಿಸಲಾಗಿತ್ತು. ಪ್ರಸ್ತುತ ದಿನಗಳಲ್ಲಿ ನಿನ್ನೆ ಮಾಡಿದ ಕೆಲಸ ಇಂದೇ ಮರೆತು ಬಿಡುತ್ತಾರೆ. ಆದರೆ ಎಂದೋ ಮಾಡಿದ ಕೆಲಸ ನೆನಪಿಟ್ಟುಕೊಂಡು ಕಾರ್ಯಕ್ರಮಕ್ಜೆ ಆಹ್ವಾನ ನೀಡಿರುವುದು ಸಂತಸ ತಂದಿದೆ ಎಂದರು.
ಕಾರ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಮಾತನಾಡಿ, ಯುವ ಸಮುದಾಯ ಕ್ರೀಡೆಗೆ ಬೇಗ ಆಕರ್ಷಿತವಾಗುವುದರಿಂದ ಸಂಘಟನೆಗೆ ಕ್ರೀಡೆ ಮುಖ್ಯ, ಅಂಬೇಡ್ಕರ್ ಅವರ ಸಹೋದರತೆ, ಸಮಾನತೆ ಮತ್ತು ತಿಳುವಳಿಕೆಯ ಧ್ಯೇಯವೂ ಕ್ರೀಡೆಯಿಂದ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಕಾಪಿಕಾಡ್ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಮುಕ್ತೇಸರ ಈಶ್ವರ್ ಉಳ್ಳಾಲ್, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಕೊಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಚಂಚಲಾಕ್ಷಿ, ಪ್ರಮುಖರಾದ ಚಂದ್ರಿಕಾ ರೈ, ಸಂತೋಷ್ ಉಳ್ಳಾಲ್, ಸುಂದರ್ ಬೆಳುವಾಯಿ, ಡಾ.ಸುಜನ್ ಭಂಡಾರಿ, ಸರೋಜಿನಿ, ಮೀನಾಕ್ಷಿ, ವಾಣಿ, ಸುಂದರಿ, ಉಷಾ, ಅಂಜಲಿ, ಸತೀಶ್ ಕಂಚಿಕೋಡಿ, ಎಸ್‌ಎಸ್‌ಕೆ ಸಂದೇಶ್ ಕೋಲಾರ, ಪ್ರವೀಣ್ ಕುಮಾರ್ ಜೆ.ಪಿ., ಕ್ರೀಡಾಕೂಟ ಸಂಯೋಜಕ ಜಗದೀಶ್ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟ ಸಂಯೋಜಕ ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.