ಸದನದಲ್ಲಿ ಶಿಸ್ತು ರೂಪಿಸಲು ಶ್ರೀ ಮಹಾವೀರ ಕಾಲೇಜು ಕಲಿಸಿದ ಪಾಠ ನೆರವಾಗಿದೆ: ಯು.ಟಿ ಖಾದರ್
ಮೂಡುಬಿದಿರೆ : ಸದನದಲ್ಲಿ ಶಿಸ್ತು ರೂಪಿಸಲು ಶ್ರೀ ಮಹಾವೀರ ಕಾಲೇಜು ಕಲಿಸಿದ ಪಾಠ ನೆರವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.
ಬೆಂಗಳೂರಿನಲ್ಲಿ ಆಯೋಜಿತವಾಗಿದ್ದ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಕಾಲೇಜು ಯಾವ ರೀತಿ ಮಾರ್ಗದರ್ಶಿಯಾಯಿತು ಎಂದು ವಿವರಿಸಿದರು.
ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ನಾವು ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾಪಕರು ನಮಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮೆಲ್ಲ ತಪ್ಪುಗಳನ್ನು ತಿದ್ದಿ ಅಗತ್ಯವಿದ್ದಾಗ ನಮ್ಮ ಪೋಷಕರನ್ನೂ ಕರೆಸಿ ಬುದ್ದಿ ಹೇಳಿದ್ದರಿಂದಲೇ ಸಮಾಜದಲ್ಲಿ ಈ ಸಾಧನೆಯೊಂದಿಗೆ ಗುರುತಿಸುವಂತಾಗಿದೆ. ಮಹಾವೀರ ಕಾಲೇಜು ವಿದ್ಯಾರ್ಥಿ ಗಳಾಗಿದ್ದವರು ಇಂದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಕಾಲೇಜು ನಮಗೆ ಅಂದು ಕಲಿಸಿಕೊಟ್ಟ ಪಾಠ ಇಂದಿಗೂ ದಾರಿದೀವಿಗೆಯಾಗಿದ್ದು ಸದಾ ನೆನಪಿನಲ್ಲುಳಿಯುವಂತಹುದು. ಮಹಾವೀರ ಕಾಲೇಜು ವಜ್ರಮಹೋತ್ಸವ ಆಚರಿಸುತ್ತಿರುವ ಈ ವರ್ಷದಲ್ಲಿ ಕಾಲೇಜಿನ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ, ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾವೀರ ಕಾಲೇಜು ಈ ಭಾಗದಲ್ಲಿ ಮಾಡಿದ ಶೈಕ್ಷಣಿಕ ಕ್ರಾಂತಿಗೆ ಹಳೆ ವಿದ್ಯಾರ್ಥಿಗಳ ಯಶೋಗಥೆಗಳೇ ಸಾಕ್ಷಿಯಾಗಿದೆ ಎಂದರು. ಯಾವುದೇ ರೀತಿಯಲ್ಲೂ ಲಾಭ ದಾಯಕವಲ್ಲದ ಶಿಕ್ಷಣ ಇಂದಿನಂತೆ ಉದ್ಯಮವೂ ಆಗಿರದ ಆ ಕಾಲಘಟ್ಟದಲ್ಲಿ ಕೇವಲ ಈ ಭಾಗದ ಮಕ್ಕಳ ಕಾಲೇಜು ಶಿಕ್ಷಣಕ್ಕಾಗಿ ಮಣಿಪಾಲ್ ಸಮೂಹದಿಂದ ಆರಂಭಗೊಂಡಿದ್ದ ಕಾಲೇಜು ಸಹಸ್ರ ಸಹಸ್ರ ಮಕ್ಕಳ ಬದುಕನ್ನು ರೂಪಿ ಸಿದೆ. ಟಿ.ಎಂ.ಎ ಪೈ, ಎಸ್.ಎನ್ ಮೂಡುಬಿದಿರೆ ಮೊದಲಾದವರು ಅವಿಭಜಿತ ದಕ್ಷಿಣ ಕನ್ನಡದ ಹಲವು ಪಟ್ಟಣಗಳಲ್ಲಿ ಅಲಭ್ಯವಾಗಿದ್ದ ಕಾಲೇಜನ್ನು ಮೂಡುಬಿದಿರೆಯಲ್ಲಿ ಆರಂಭಿಸಿ, ಯಶಸ್ವಿ ಸಭಾಧ್ಯಕ್ಷರೆನಿಸಿಕೊಂಡಿರುವ ಯು.ಟಿ ಖಾದರ್ ಅವರಂತೆ ಸಹಸ್ರಾರು ಜನರ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ಅವರನ್ನು ವಜ್ರಮಹೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲ ಸೇರಿ ಸ್ಮರಿಸಬೇಕಿದೆ. ಕಾಲೇಜು ಶಿಕ್ಷಣ ಬಡ ಮಕ್ಕಳ ಕಾಲೇಜು ಶಿಕ್ಷಣದ ಕನಸು ನನಸು ಮಾಡುತ್ತಿದೆ ಎಂದರು.
ಮಹಾವೀರ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ ಕಾಲೇಜಿನ ಪ್ರಸ್ತುತ ಕಾರ್ಯಕ್ರಮಗಳನ್ನು ಪರಿಚಯಿಸಿ ಬಡ ಮಕ್ಕಳ ಕಾಲೇಜು ಶಿಕ್ಷಣ, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಜೊತೆಗೆ ಕಾಲೇಜಿನ ಅಭಿವೃದ್ಧಿ ಕೆಲಸಗಳಲ್ಲಿ ಹಳೆ ವಿದ್ಯಾರ್ಥಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ. ಮಾತನಾಡಿ, ರಾಜ್ಯದ ಮತ್ತು ಮುಂಬೈ, ಕೇರಳ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳನ್ನೂ ಸಂಪರ್ಕಿಸುವ ಕಾರ್ಯ ನಡೆಯುತ್ತಿದ್ದು ಎಲ್ಲಾ ಪ್ರಮುಖ ನಗರ ಗಳಲ್ಲೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಸುವುದಾಗಿ ತಿಳಿಸಿದರು. ಅನಿತಾ ಸುರೇಂದ್ರ ಕುಮಾರ್, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿಗಳು ಕಾಲೇಜು ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿದರು.