ಧರ್ಮಸ್ಥಳ ದೂರು | ಅನಿಯಂತ್ರಿತ ಅಗೆಯುವಿಕೆಯಿಂದ ಸಾಮೂಹಿಕ ಅಂತ್ಯಕ್ರಿಯೆಯ ಸಾಕ್ಷ್ಯ ನಾಶವಾಗಬಹುದು: ಎಸ್‌ಐಟಿಗೆ ಮಣ್ಣಿನ ವಿಜ್ಞಾನಿಗಳಿಂದ ಎಚ್ಚರಿಕೆ
"ಧರ್ಮಸ್ಥಳದಲ್ಲಿ ಹುಡುಕಬೇಕಾಗಿರುವುದು ಮೂಳೆಯ ಅವಶೇಷಗಳಿರುವ ರಾಸಾಯನಿಕ ಮಣ್ಣು"
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನಡೆಸುತ್ತಿರುವ ಕಾರ್ಯಾಚರಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮಣ್ಣಿನ ವಿಜ್ಞಾನಿಗಳು, ಅನಿಯಂತ್ರಿತ ಅಗೆಯುವಿಕೆಯಿಂದ ಸಾಮೂಹಿಕ ಅಂತ್ಯಕ್ರಿಯೆಯ ಸಾಕ್ಷ್ಯ ನಾಶವಾಗಬಹುದು ಎಂದು ಎಸ್‌ಐಟಿಗೆ ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಭೌಗೋಳಿಕ ರಚನೆಯಿಂದಾಗಿ ಧರ್ಮಸ್ಥಳದಲ್ಲಿನ ಮಣ್ಣು ಮತ್ತು ನೆಲದಲ್ಲಿ ಹುದುಗಿದ ಮೂಳೆಗಳು ವರ್ಷಗಳು ಕಳೆದಂತೆ ಕರಗಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಬಯಸದ ಮಣ್ಣಿನ ವಿಜ್ಞಾನಿಯೊಬ್ಬರು ಧರ್ಮಸ್ಥಳದಲ್ಲಿ ಹುಡುಕಬೇಕಿರುವುದು ಮೂಳೆಗಳನ್ನಲ್ಲ. ಕಳೆಬರವೂ ಅಲ್ಲ. ಬದಲಾಗಿ ಮೂಳೆಯ ಅವಶೇಷಗಳಿರುವ ರಾಸಾಯನಿಕ ಮಣ್ಣನ್ನು ಎಸ್ಐಟಿಯು ತೆಗೆದು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಜೆಸಿಬಿ ಬಳಸಿ ನಡೆಸುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕುರಿತ ವೈಜ್ಞಾನಿಕ ವ್ಯಾಖ್ಯಾನವನ್ನು ಅವರು ಮುಂದಿಟ್ಟಿದ್ದಾರೆ. ಎಸ್ಐಟಿಯು ತನ್ನ ಕಾರ್ಯಾಚರಣೆಯಲ್ಲಿ ತಜ್ಞರು ಸೂಚಿಸಿದ ವ್ಯಾಖ್ಯಾನದಲ್ಲಿ ಮುಂದುವರೆದರೆ ತನಿಖೆಯು ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಭಾರೀ ಮಳೆಯಾಗುವ ಕರಾವಳಿ ಪ್ರದೇಶದಲ್ಲಿರುವ ಧರ್ಮಸ್ಥಳದಲ್ಲಿನ ಲ್ಯಾಟರೈಟ್ ಮಣ್ಣಿನ ವೈಶಿಷ್ಟ್ಯಗಳು ಸಾಕ್ಷ್ಯಗಳ ಸಂರಕ್ಷಣೆಗೆ ಗಂಭೀರ ಸವಾಲುಗಳನ್ನು ತಂದಿದ್ದು, ಯಾಂತ್ರಿಕ ಅಥವಾ ಅನಿಯಂತ್ರಿತ ಅಗೆಯುವಿಕೆಯಿಂದ ಜೀವಂತ ಪುರಾವೆಗಳು ಶಾಶ್ವತವಾಗಿ ನಾಶವಾಗುವ ಅಪಾಯವಿದೆ ಎಂದು ಮಣ್ಣಿನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಪ್ರದೇಶದ ಮಣ್ಣು ಲ್ಯಾಟರೈಟ್ ಪ್ರಭೇದಕ್ಕೆ ಸೇರಿದ್ದು, ಇದು ಹೆಚ್ಚು ಆಮ್ಲೀಯ (pH 4.5–6), ಕಬ್ಬಿಣ ಮತ್ತು ಅಲ್ಯೂಮಿನಿಯಂ ಆಕ್ಸೈಡ್‌ಗಳಲ್ಲಿ ಸಮೃದ್ಧವಾಗಿದೆ. ಇಂತಹ ಮಣ್ಣಿನಲ್ಲಿ, ಮಳೆ ನೀರಿನ ತೀವ್ರ ಹರಿವು ಮತ್ತು ತೇವಾಂಶವು ಮೂಳೆಗಳಲ್ಲಿನ ಖನಿಜ ಅಂಶಗಳನ್ನು ಬೇಗನೆ ಕರಗಿಸುತ್ತವೆ. ಹೈಡ್ರಾಕ್ಸಿಅಪಟೈಟ್ ಎಂಬ ಕ್ಯಾಲ್ಸಿಯಂ ಫಾಸ್ಫೇಟ್ ಸಂಯೋಗ ಆಮ್ಲೀಯತೆಗೆ ಅತೀ ಸಂವೇದನಾಶೀಲವಾಗಿರುವುದರಿಂದ, ಅದರ ನಾಶದ ನಂತರ ಉಳಿದ ಕಾಲಜನ್ ಸೂಕ್ಷ್ಮಜೀವಿ ಚಟುವಟಿಕೆ ಮತ್ತು ಶಿಲೀಂಧ್ರಗಳಿಂದ ವೇಗವಾಗಿ ಕೊಳೆಯುತ್ತದೆ.
ಧರ್ಮಸ್ಥಳದಂತಹ ಪ್ರದೇಶಗಳಲ್ಲಿ ವಾರ್ಷಿಕ ಮಳೆ 3,500 ಮಿಮೀ ಮೀರುತ್ತದೆ. ಈ ತೇವಾಂಶ, ಆಮ್ಲೀಯತೆ ಹಾಗೂ ಉಷ್ಣವಲಯದ ತಾಪಮಾನಗಳು ಸೇರಿ ಮೂಳೆಗಳ ವಿಭಜನೆಯನ್ನು ವೇಗವಾಗಿ ಪೂರ್ಣಗೊಳಿಸುತ್ತವೆ. ಹೀಗಾಗಿ 20 ವರ್ಷಕ್ಕಿಂತ ಹಳೆಯ ಸಮಾಧಿಗಳಲ್ಲಿ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗುವ ಸಾಧ್ಯತೆ ತೀರಾ ಕಡಿಮೆ.
ಜಾಗತಿಕ ಪ್ರಕರಣಗಳ (ರುವಾಂಡಾ, ಕಾಂಬೋಡಿಯಾ, ಶ್ರೀಲಂಕಾ, ಸ್ರೆಬ್ರೆನಿಕಾ) ಅಧ್ಯಯನ ಮತ್ತು ಮಣ್ಣಿನ ವಿಜ್ಞಾನದ ಆಧಾರದ ಮೇಲೆ, ಧರ್ಮಸ್ಥಳದಂತಹ ಪರಿಸರದಲ್ಲಿ ಪುರಾವೆಗಳ ಉಳಿವಿನ ಸಾಧ್ಯತೆಯನ್ನು ಈ ಈ ರೀತಿಯಾಗಿ ವಿಂಗಡಿಸಬಹುದು.
ಇತ್ತೀಚಿನ ಸಮಾಧಿಗಳು ಅಂದರೆ 15 ವರ್ಷ ಕೆಳಗಿನ ಸಮಾಧಿಗಳಲ್ಲಿ ಸಂಪೂರ್ಣ ಅಥವಾ ಭಾಗಶಃ ಅಸ್ಥಿಪಂಜರ ಪತ್ತೆಯಾಗುವ ಸಾಧ್ಯತೆ ಹೆಚ್ಚಿದೆ. 15–20 ವರ್ಷ ಹಳೆಯ ಸಮಾಧಿಗಳಲ್ಲಿ ಹಲ್ಲುಗಳು ಮತ್ತು ಕೆಲ ಅಸ್ತಿಪಂಜರದ ತುಣುಕುಗಳು ಮಾತ್ರ ಉಳಿಯುವ ಸಾಧ್ಯತೆಗಳಿವೆ. 20 ವರ್ಷಕ್ಕಿಂತ ಹಳೆಯ ಸಮಾಧಿಗಳಲ್ಲಿ ಸಾಮಾನ್ಯವಾಗಿ ಹಲ್ಲುಗಳು, ದಂತಕವಚದ ಚೂರುಗಳು ಮತ್ತು ಮಣ್ಣಿನ ರಾಸಾಯನಿಕ/ಸೂಕ್ಷ್ಮ ಸಾಕ್ಷ್ಯಗಳು ಮಾತ್ರ ಸಿಗಬಹುದು.
ತಜ್ಞರು ಹಳೆಯ ಸಮಾಧಿಗಳಿಗೆ ಭೌತಿಕ ಮೂಳೆಗಳಿಗಿಂತಲೂ ಫಾಸ್ಫೇಟ್ ಪ್ರಮಾಣ, ಜಾಡಿನ ಲೋಹಗಳು, ಸೂಕ್ಷ್ಮ ಮೂಳೆಯ ತುಣುಕುಗಳು ಹಾಗೂ ದಂತಕವಚದ ಕಣಗಳಂತಹ ರಾಸಾಯನಿಕ ಮತ್ತು ಸೂಕ್ಷ್ಮ ಪುರಾವೆಗಳೇ ವಿಶ್ವಾಸಾರ್ಹ ಎಂದು ಹೇಳಿದ್ದಾರೆ.
ಜೆಸಿಬಿ ಮುಂತಾದ ಭಾರೀ ಯಂತ್ರೋಪಕರಣಗಳಿಂದ ಉತ್ಖನನ ನಡೆಸುವುದು ಹಲವು ಗಂಭೀರ ಅಪಾಯಗಳನ್ನು ಉಂಟುಮಾಡುತ್ತದೆ ಎಂದೂ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ತಜ್ಞರ ಪ್ರಕಾರ, ಹಳೆಯ ಸಮಾಧಿಗಳಲ್ಲಿ JCB ಮೂಲಕ ಅಗೆಯುವಿಕೆಯನ್ನು ನಡೆಸುವುದು ಪುರಾವೆಗಳ ಶವಸಂಸ್ಕಾರ ನಡೆಸಿದಂತೆಯೇ!
ಜೆಸಿಬಿಗಳಿಂದ ಅನಿಯಂತ್ರಿತವಾಗಿ ಅಗೆಯುವುದರಿಂದ ಮೂಳೆ ತುಣುಕುಗಳು ಸುಲಭವಾಗಿ ನಾಶವಾಗುವ ಅಪಾಯವಿದೆ. ಸಮಾಧಿಯ ಪದರಶಾಸ್ತ್ರವೇ ಅಳಿಸಿಹೋಗಿ, ಸಮಾಧಿ ಮಣ್ಣು ಸುತ್ತಮುತ್ತಲಿನ ಮಣ್ಣಿನೊಂದಿಗೆ ಬೆರೆತು ರಾಸಾಯನಿಕ ಗುರುತುಗಳು ದುರ್ಬಲಗೊಳ್ಳುತ್ತವೆ. ಇದು ಅಪರಾಧದ ಸಾಕ್ಷ್ಯಗಳನ್ನು ನಾಶ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಜ್ಞರ ಪ್ರಕಾರ, ಲ್ಯಾಟರೈಟ್ ಮಣ್ಣು ಒಮ್ಮೆ ಕದಡಿದರೆ, ಅದು ಹೊಸ ಮಣ್ಣಿನಂತಾಗುತ್ತದೆ. ಈ ಪರಿಸ್ಥಿತಿಯಲ್ಲಿ ಸಮಾಧಿಗಳ ಗುರುತುಗಳನ್ನು ಪತ್ತೆಹಚ್ಚುವುದು ಬಹುತೇಕ ಅಸಾಧ್ಯ.
ನೆಲ ನುಗ್ಗುವ ರಾಡಾರ್ (ಜಿಪಿಆರ್)ನ ಕಾರ್ಯಪದ್ಧತಿಯ ಕುರಿತು ಉಲ್ಲೇಖಿಸಿದ ಮಣ್ಣಿನ ತಜ್ಞರು, ಜಿಪಿಆರ್ ಮಣ್ಣಿನ ಅಡಚಣೆಗಳನ್ನು ಪತ್ತೆಹಚ್ಚಲು ಸಹಾಯಕ, ಆದರೆ ಲ್ಯಾಟರೈಟ್ ಮಣ್ಣಿನಲ್ಲಿ ಮೂಳೆಗಳನ್ನು ನೇರವಾಗಿ ಗುರುತಿಸಲು ಸಾಧ್ಯವಿಲ್ಲ. ದಶಕಗಳಷ್ಟು ಹಳೆಯ ಸಮಾಧಿಗಳಲ್ಲಿ ಮಣ್ಣಿನ ರಾಸಾಯನಿಕ ವಿಶ್ಲೇಷಣೆಯೇ ಹೆಚ್ಚು ವಿಶ್ವಾಸಾರ್ಹ ಎಂದು ಅವರು ಹೇಳಿದರು.
ನಿಯಂತ್ರಿತ ವಿಧಿವಿಜ್ಞಾನ ಉತ್ಖನನಕ್ಕೆ ಒತ್ತಾಯಿಸಿದ ಅವರು, ಯಾಂತ್ರಿಕ ಅಗೆಯುವಿಕೆಯನ್ನು ತಕ್ಷಣ ನಿಲ್ಲಿಸಿ, ವಿಧಿವಿಜ್ಞಾನ ಶಿಷ್ಟಾಚಾರ ಪಾಲನೆಗೆ ಎಸ್‌ಐಟಿಗೆ ಅವರು ಕರೆ ನೀಡಿದರು.
ಜಿಪಿಆರ್ ಅಥವಾ ಇತರ ಆಕ್ರಮಣಶೀಲವಲ್ಲದ ವಿಧಾನಗಳಿಂದ ಸಾಕ್ಷ್ಯ ಪತ್ತೆ ಹಚ್ಚಬೇಕು. ವಿಧಿವಿಜ್ಞಾನ ಮೇಲ್ವಿಚಾರಣೆಯಲ್ಲಿ ಸಣ್ಣ, ಅಳತೆ ಮಾಡಿದ ಪದರಗಳಲ್ಲಿ ಉತ್ಖನನ ನಡೆಸಬೇಕು.ರಾಸಾಯನಿಕ ಹಾಗೂ ಸೂಕ್ಷ್ಮ ವಿಶ್ಲೇಷಣೆಗೆ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಬೇಕು. ಸೂಕ್ಷ್ಮ ಮೂಳೆ ತುಣುಕುಗಳು ಮತ್ತು ಹಲ್ಲುಗಳನ್ನು ಪತ್ತೆಹಚ್ಚಲು ಮಣ್ಣಿನ ಜರಡುವಿಕೆ ನಡೆಸಬೇಕು. GPR, ಮ್ಯಾಗ್ನೆಟೋಮೆಟ್ರಿ, ರೆಸಿಸ್ಟಿವಿಟಿ ಮುಂತಾದ ಸಮೀಕ್ಷೆಗಳಿಂದ ಗುರುತಿಸಿರುವ ಸ್ಥಳಗಳ ನಕ್ಷೆ ಮಾಡಬೇಕು, ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಮಣ್ಣಿನ ವಿಜ್ಞಾನಿ ಆಗ್ರಹಿಸಿದ್ದಾರೆ.
"ನಿಯಂತ್ರಿತ, ವೈಜ್ಞಾನಿಕ ವಿಧಾನವೇ ಉಳಿದಿರುವ ಅತೀ ಸಣ್ಣ ಪುರಾವೆಗಳನ್ನು ಸಂರಕ್ಷಿಸಬಲ್ಲುದು. ಅವು ನಾಶವಾದರೆ, ಧರ್ಮಸ್ಥಳದಲ್ಲಿ ಹೂತು ಹಾಕಲಾಗಿದೆ ಎನ್ನಲಾದ ಸಮಾಧಿಗಳ ಹಿಂದಿನ ಸತ್ಯವನ್ನು ಸಾಬೀತುಪಡಿಸುವುದು ಅಸಾಧ್ಯ" ಎಂದು ಅವರು ಎಚ್ಚರಿಸಿದ್ದಾರೆ.
1994ರಿಂದ 2014ರ ನಡುವೆ ವ್ಯಕ್ತಿಗಳ ಕಣ್ಮರೆಗೆ ಸಂಬಂಧಿಸಿದ ಸಾಮೂಹಿಕ ಸಮಾಧಿ ಆರೋಪಗಳ ಬಗ್ಗೆ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ಮುಂದುವರಿದಿದೆ.