×
Ad

ಉಪ್ಪಿನಂಗಡಿ: ಆಯುರ್ವೇದ ಪಂಡಿತ ಕೆ. ಶೀನಪ್ಪ ಶೆಟ್ಟಿ ನಿಧನ

Update: 2025-07-23 14:14 IST

ಉಪ್ಪಿನಂಗಡಿ: ಪಾರಂಪಾರಿಕ ಆಯುರ್ವೇದ ಪಂಡಿತ ಕೆ.ಶೀನಪ್ಪ ಶೆಟ್ಟಿ (96) ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.23ರಂದು ನಿಧನರಾದರು.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಸೇವೆ ನೀಡಿದ್ದ‌ ಇವರು, ಇಲ್ಲಿನ ವಿಜಯ ವೈದ್ಯ ಶಾಲೆಯ ಮಾಲಕರಾಗಿದ್ದರು.

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಕುಲ್ಲಂಜ ಎಂಬಲ್ಲಿ 1929ರ ಜು.26ರಂದು ಜನಿಸಿದ ಕೆ. ಶೀನಪ್ಪ ಶೆಟ್ಟಿಯವರು ಪ್ರೌಢಶಿಕ್ಷಣದ ಬಳಿಕ ತನ್ನ ಭಾವನವರಾದ ಪಂಡಿತ್ ವೆಂಕಪ್ಪ ರೈಯವರ ಮಾರ್ಗದರ್ಶನದಲ್ಲಿ ಗಿಡಮೂಲಿಕೆಗಳ ಔಷಧಿ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದರು. ಬ್ರಿಟಿಷ್ ಸರಕಾರದ ಅವಧಿಯಲ್ಲಿ ನಡೆಸುತ್ತಿದ್ದ ಪಾರಂಪರಿಕ ವೈದ್ಯ ಶಾಸ್ತ್ರದ ವೈದ್ಯ ವಿಶಾರದಾ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ.ಎಸ್. ಶೆಟ್ಟಿ ಎಂಬ ಹೆಸರಿನೊಂದಿಗೆ ಜನಾನುರಾಗಿದ್ದಲ್ಲದೆ, ಉಪ್ಪಿನಂಗಡಿಯಲ್ಲಿ ನೆಲೆಸಿ, ಇಲ್ಲಿ ವಿಜಯ ವೈದ್ಯ ಶಾಲಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಪಾರಂಪಾರಿಕ ಆಯುರ್ವೇದ ಔಷಧಿಯನ್ನು ನೀಡುವ ಮೂಲಕ ಊರಿನೆಲ್ಲೆಡೆ ಚಿರಪರಿಚಿತರಾಗಿದ್ದರು.

 ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳ ಬಗ್ಗೆ ಅಮೂಲಾಗ್ರ ಮಾಹಿತಿಯನ್ನು ಹೊಂದಿದ್ದ ಇವರು, ದ.ಕ ಜಿಲ್ಲೆಯ ಶಿರಾಡಿ ದಟ್ಟ್ಟಾರಣ್ಯದ ವರೆಗೂ ಸಂಚರಿಸಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಗೆ ಬಗೆಯ ಔಷಧಿಗಳನ್ನು ತಯಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದರು.

ತನ್ನ 13 ನೇ ವಯಸ್ಸಿನಲ್ಲಿ ಅಂದರೆ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದಾಸ್ಯದ ಸಂಕೇತವಾದ ಆಂಗ್ಲರ ವಸ್ತುಗಳನ್ನು ತ್ಯಜಿಸಬೇಕೆಂಬ ಗಾಂಧೀಜಿ ಕರೆಗೆ ಸ್ಪಂದಿಸಿದ ಇವರು ಕಗ್ಗತಲಿನ ರಾತ್ರಿಯಲ್ಲಿ ಬ್ರಿಟಿಷರ ವಿರುದ್ಧ ಗೋಡೆ ಬರಹವನ್ನು ಬರೆಯುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಅಳಿಲ ಸೇವೆಯನ್ನು ಸಲ್ಲಿಸಿದ ಕೀರ್ತಿಯನ್ನು ಪಡೆದಿದ್ದರು.

ಯಕ್ಷಗಾನ ತಾಳಮದ್ದಲೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಅವರು, ಭೀಮ, ದುಶ್ಯಾಸನ, ಹಾಗೂ ಕಠಿಣ ಸ್ವರದ ರಾಕ್ಷಸರ ಪಾತ್ರಕ್ಕೆ ಜೀವ ತುಂಬಿಸುವ ಅರ್ಥಗಾರಿಕೆಯನ್ನು ಕರಗತ ಮಾಡಿಕೊಂಡಿದ್ದರು. ಯಕ್ಷಗಾನ ಕ್ಷೇತ್ರದ ನಂಟಿನಲ್ಲಿ ಭಾಗವತಿಕೆಯಲ್ಲೂ ಸ್ವ ಅಧ್ಯಾಯವನ್ನು ನಡೆಸಿ ಒಂದೆರಡು ಭಾಗವತಿಕೆಯನ್ನು ನಿರ್ವಹಿಸಿದ್ದರು.

ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದಇವರು ತಮ್ಮ 35 ನೇ ವಯಸ್ಸಿನ ವರೆಗೆ ಯಕ್ಷಗಾನದ ಜೊತೆಗೆ ನಾಟಕ ರಂಗದಲ್ಲೂ ಜನ ಮೆಚ್ಚುಗೆ ಗಳಿಸಿದ್ದರು. ಉಪ್ಪಿನಂಗಡಿಯ ಸರಕಾರಿ ಪ್ರೌಢ ಶಾಲೆಯನ್ನು ನಿರ್ಮಾಣದ ವೇಳೆ ಆರ್ಥಿಕ ಕೊರತೆ ಎದುರಾದಾಗ  ಜಿಲ್ಲೆಯ ಹಲವೆಡೆ ನಾಟಕ ಪ್ರದರ್ಶನಗಳನ್ನು ನೀಡಿ ಸಾವಿರಾರು ರೂಪಾಯಿ ಸಂಗ್ರಹಿಸಿದ್ದರು.

ಉಪ್ಪಿನಂಗಡಿಯಲ್ಲಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕಾಧ್ಯಕ್ಷರಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು.

ಮೃತರು ಪುತ್ರ ಡಾ. ಯತೀಶ್ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‍ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೃತ ಕೆ.ಎಸ್. ಶೆಟ್ಟಿಯವರ ಪ್ರಾರ್ಥಿವ ಶರೀರವನ್ನು ಇಳಂತಿಲ ಗ್ರಾಮದ ಕುಂಟಾಲಕಟ್ಟೆ ಎಂಬಲ್ಲಿನ ತುಂಗಾ ನಿವಾಸಕ್ಕೆ ತಂದು ಮಧ್ಯಾಹ್ನ 2 ಗಂಟೆಯಿಂದ ಸಮಜೆ 4:30ರ ತನಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಮೃತರ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗುವುದು ಎಂದು ಮೃತರ ಪುತ್ರ ಕೆ. ಜಗದೀಶ ಶೆಟ್ಟಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News