ನ.25 ರಿಂದ ಮಂಗಳೂರು ವಿವಿಯಲ್ಲಿ "ವೇವ್ಸ್ 2025 - ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ"
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ "ವೇವ್ಸ್ 2025 – ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ"ವು ನವೆಂಬರ್ 25ರಿಂದ 27ರ ವರೆಗೆ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೆಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಹೇಳಿದರು.
ಅವರು ಸೋಮವಾರ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡುತ್ತಾ, ಈ ವರ್ಷದ ಉತ್ಸವದ ವಿಷಯ ಸಾಂಸ್ಕೃತಿಕ ಸಂಯೋಜನೆ 2025: ವಿಕಸಿತ ಭಾರತದತ್ತ” ಆಗಿದ್ದು, ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆಯ (AIU) ನವದೆಹಲಿ ಆಶ್ರಯದಲ್ಲಿ ನಡೆಯುವ AIU 39ನೇ ಅಂತರ-ವಿಶ್ವವಿದ್ಯಾಲಯ ಯುವೋತ್ಸವ (ಯುನಿಫೆಸ್ಟ್) 2025–26ರಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆಮಾಡುವುದು ಇದರ ಉದ್ದೇಶವಾಗಿದೆ ಎಂದರು.
25ರಂದು ಬೆಳಿಗ್ಗೆ 9:30ಕ್ಕೆ ಮಂಗಳಾ ಸಭಾಂಗಣದಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾದ ಪ್ರೊ. ಪಿ.ಎಲ್. ಧರ್ಮ ಅವರು ಅಧ್ಯಕ್ಷತೆ ವಹಿಸಲಿರುವರು. ಡಾ. ಶಾನಿ ಕೆ.ಆರ್., ನಿವೃತ್ತ ರಾಜಕೀಯ ವಿಜ್ಞಾನ ಪ್ರಾಧ್ಯಾಪಕಿ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನಗಳ ಈ ಉತ್ಸವದಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಮತ್ತು ಲಲಿತಕಲೆ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ವಾದ್ಯ/ಸ್ವರ, ಜನಪದ ವಾದ್ಯ, ಶಾಸ್ತ್ರೀಯ ಮತ್ತು ಜನಪದ ನೃತ್ಯ, ಸೃಜನಾತ್ಮಕ ನೃತ್ಯ ನಿರ್ದೇಶನ, ಚರ್ಚೆ ಸ್ಪರ್ಧೆ, ಭಾಷಣ, ರಸಪ್ರಶ್ನೆ, ಏಕಾಂಕ ನಾಟಕ, ಕಿರು ನಾಟಕ, ಮೂಕಾಭಿನಯ (ಮೈಮ್), ಹಾಸ್ಯಾನುಕರಣ (ಮಿಮಿಕ್ರಿ), ಹಾಗೂ ಚಿತ್ರಕಲೆ, ಕೊಲಾಜ್, ಪೋಸ್ಟರ್ ನಿರ್ಮಾಣ, ಮಣ್ಣಿನ ಶಿಲ್ಪ, ವ್ಯಂಗ್ಯಚಿತ್ರ, ರಂಗೋಲಿ ಮುಂತಾದ ದೃಶ್ಯಕಲೆ ಸ್ಪರ್ಧೆಗಳು ನಡೆಯಲಿವೆ. ಈ ಉತ್ಸವವು ವಿದ್ಯಾರ್ಥಿ ಕಲಾವಿದರ ಪ್ರತಿಭೆಯನ್ನು ಪೋಷಿಸಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಿಗೆ ಅವರನ್ನು ಮುನ್ನಡೆಸುವ ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯವು ಸ್ಥಾಪನೆಯಾದ ಆರಂಭದ ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ದೀರ್ಘಪರಂಪರೆಯನ್ನು ಹೊಂದಿದೆ.
ವೇವ್ಸ್ 2025 ಸ್ಪರ್ಧೆಯ ಪ್ರಥಮ ಸ್ಥಾನ ವಿಜೇತರಿಗೆ 2026ರ ಫೆಬ್ರವರಿ 9ರಿಂದ 13ರ ವರೆಗೆ ಮೈಸೂರುನ ಜಿಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ನಲ್ಲಿ ನಡೆಯುವ AIU 39ನೇ ದಕ್ಷಿಣ-ಪೂರ್ವ ವಲಯ ಅಂತರ-ವಿಶ್ವವಿದ್ಯಾಲಯ ಯುವೋತ್ಸವಕ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶ ಒದಗಿಸಲಾಗುವುದು. ವಲಯ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳಿಗೆ 2026ರ ಮಾರ್ಚ್ 10ರಿಂದ 14ರ ವರೆಗೆ ಚೆನ್ನೈಯ ಸಥ್ಯಭಾಮಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ನಡೆಯುವ AIU ರಾಷ್ಟ್ರೀಯ ಯುನಿಫೆಸ್ಟ್‌ನಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶ ದೊರಕಲಿದೆ ಎಂದರು.
ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ 15 ಸಂಯೋಜಿತ ಕಾಲೇಜುಗಳಿಂದ ಸುಮಾರು 500 ವಿದ್ಯಾರ್ಥಿಗಳು ವೇವ್ಸ್ 2025ನಲ್ಲಿ ನೋಂದಣಿಯಾಗಿದ್ದು, ವಿಶ್ವವಿದ್ಯಾಲಯದ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸುವಲ್ಲಿ ಮತ್ತು ಕಲಾತ್ಮಕ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಲಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ, ಡಾ. ವಿಶ್ವನಾಥ್ , ಪ್ರಚಾರ ಸಮಿತಿಯ ಸದಸ್ಯ, ಪತ್ರಕರ್ತ ಡಾ.ಸತೀಶ್ ಕೊಣಾಜೆ ಉಪಸ್ಥಿತರಿದ್ದರು.