×
Ad

ವೆನ್‌ಲಾಕ್ ಆಸ್ಪತ್ರೆ ಕರಾವಳಿ ಆರೋಗ್ಯ ಕ್ಷೇತ್ರದ ಕಿರೀಟದ ಗರಿ: ಸ್ಪೀಕರ್ ಯು.ಟಿ.ಖಾದರ್

► ವೆನ್ಲಾಕ್ - ಲೇಡಿಗೋಷನನ್ ಆಸ್ಪತ್ರೆ 175ನೇ ಸಂಭ್ರಮಾಚರಣೆ ಗೆ ಚಾಲನೆ ► ವೆನ್ಲಾಕ್, ಲೇಡಿಗೋಷನ್ , ಕೆಎಂಸಿ ಆಸ್ಪತ್ರೆಗಳ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟನೆ

Update: 2025-09-21 19:50 IST

ಮಂಗಳೂರು: ನೂರ ಎಪ್ಪತ್ತೈದನೇಯ ವರ್ಷಾಚರಣೆಯ ಸಂಭ್ರಮದಲ್ಲಿರುವ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯು ಕರಾವಳಿ ಪ್ರದೇಶದ ಆರೋಗ್ಯ ಕ್ಷೇತ್ರದ ಕಿರೀಟದ ಗರಿ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಅಭಿಫ್ರಾಯಪಟ್ಟಿದ್ದಾರೆ.

ನಗರದ ಕಂಕನಾಡಿ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ರವಿವಾರ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ವೆನ್‌ಲಾಕ್ ಆಸ್ಪತ್ರೆಯು ಅತ್ಯಂತ ಗೌರವದ ಸರಕಾರಿ ಆಸ್ಪತ್ರೆಯಾಗಿದ್ದು, ಅತ್ಯತ್ತಮವಾಗಿ ಜನರಿಗೆ ಸೇವೆ ನೀಡುತ್ತಿ ದ್ದಾರೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ಇದ್ದರೂ, ಅಲ್ಲಿನ ಜನರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಜನರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಇಟ್ಟಿರುವ ವಿಶ್ವಾಸ ಇದಕ್ಕೆ ಕಾರಣ ಎಂದು ಹೇಳಿದರು.

ಬೇಡಿಕೆ ಹೆಚ್ಚಾದಾಗ ಪೂರೈಕೆ ಕಡಿಮೆ ಇದ್ದರೆ ಸಮಸ್ಯೆ ಸಹಜ. ಅದೇ ರೀತಿ 1,000 ಬೆಡ್‌ನ ಸಾಮರ್ಥ್ಯದ ಆಸ್ಪತ್ರೆಯಲ್ಲಿ 1,500 ರೋಗಿಗಳು ಬಂದಾಗ ಅಲ್ಲಿ ಸಮಸ್ಯೆಯಾಗುತ್ತದೆ. ಸರಕಾರಿ ಆಸ್ಪತ್ರೆ ಆಗಿರುವ ಕಾರಣ ರೋಗಿಗಳನ್ನು ಹಿಂದಕ್ಕೆ ಕಳುಹಿಸುವಂತಿಲ್ಲ. ರೋಗಿಗಳಿಗೆ ಅಕ್ಕಪಕ್ಕದಲ್ಲಿ ಬೆಡ್ ಹಾಕಿ ಸಮಸ್ಯೆ ಸರಿಪಡಿಸಿದರೆ ಕೆಲವೊಮ್ಮೆ ಅದು ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ವ್ಯವಸ್ಥೆ ಸರಿ ಇಲ್ಲ ಎಂಬ ಸುಳ್ಳು ಸುದ್ದಿ ಹರಡಿ ಆಸ್ಪತ್ರೆಗೆ ಬರುವವರು ದೂರ ಸರಿಯುವಂತಾಗುತ್ತದೆ ಎಂದು ನುಡಿದರು.

ಆರೋಗ್ಯವಂತ ಮಗು ಹುಟ್ಟುವಂತಾಗಲು ಮತ್ತು ತಾಯಿ ಆರೋಗ್ಯವಾಗಿರಲು ಏನೆಲ್ಲ ವ್ಯವಸ್ಥೆ ಬೇಕೊ ? ಆ ವ್ಯವಸ್ಥೆ ಯಿಂದ ಆರಂಭಗೊಂಡು ಮೃತದೇಹದ ಪೋಸ್ಟ್ ಮಾರ್ಟಮ್ ತನಕ ಅತ್ಯುತ್ತಮ ವ್ಯವಸ್ಥೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ವ್ಯವಸ್ಥೆ ವೆನ್‌ಲಾಕ್ ಆಸ್ಪತ್ರೆಯಲ್ಲಿದೆ. ಆಸ್ಪತ್ರೆಗೆ ಬರುವ ಜನರಿಗೆ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಬೇಕಾಗಿದೆ ಎಂದರು.

ಮಂಗಳೂರಿನಲ್ಲಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಂದೇ ಕಂಪೌಂಡ್‌ನ ಒಳಗೆ ಆಲೋಪತಿ ಮತ್ತು ಆಯುಷ್ ಚಿಕಿತ್ಸೆ ಲಭ್ಯವಿದೆ. ಇಂತಹ ವ್ಯವಸ್ಥೆ ದೇಶದ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ದ.ಕ. ಜಿಲ್ಲೆಯಲ್ಲಿ ಜಯದೇವ , ನಿಮಾನ್ಸ್ ಆಸ್ಪತ್ರೆಯ ಉಪಕೇಂದ್ರಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ನುಡಿದರು.

ತಾನು ಆರೋಗ್ಯ ಸಚಿವನಾಗಿದ್ದಾಗ ತಮ್ಮಲ್ಲಿಗೆ ಬಂದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸುವಂತೆ ಕೇಳಿಕೊಂಡರು. ಆಗ ನೀವು ಹೇಳಿದಷ್ಟು ಕಡಿಮೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದು. ನಿಮಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಮಹಿಳೆಗೆ ಸಲಹೆ ನೀಡಿದಾಗ ಆ ಮಹಿಳೆ ತಮ್ಮಲ್ಲಿ ಸಿಟ್ಟಾದರು. ಸರಕಾರಿ ಆಸ್ಪತ್ರತೆಯಲ್ಲಿ ಉಚಿತವಾಗಿ ಉತ್ತಮ ಚಿಕಿತ್ಸೆ ಲಭ್ಯವಿ ದ್ದರೂ, ಕೆಲವರು ಅಲ್ಲಿಗೆ ಹೋಗಲು ತಯಾರಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಉತ್ತಮ ಚಿಕಿತ್ಸೆ ಸಿಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಕೀಳರಿಮೆ ಕೆಲವರಿಗೆ ಇದೆ ಎಂದು ಹೇಳಿದ ಖಾದರ್ ತಮಗೆ ಆಗಿರುವ ಅನುಭವವನ್ನು ಹಂಚಿಕೊಂಡರು.

ಐತಿಹಾಸಿಕ ದಿನ: ವೆನ್‌ಲಾಕ್, ಲೇಡಿಗೋಷನ್ ಮತ್ತು ಕೆಎಂಸಿ ಆಸ್ಪತ್ರೆಗಳ ಹಳೆ ವಿದ್ಯಾರ್ಥಿಗಳ ಸಂಘಗಳ ಉದ್ಘಾಟನೆ ನೆರವೇರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರು ಇದೊಂದು ಐತಿಹಾಸಿಕ ದಿನವಾಗಿದೆ. ಸರಕಾರಿ ಆಸ್ಪತ್ರೆ 175 ವರ್ಷಗಳನ್ನು ಪೂರೈಸಿ ರುವುದು ಹೆಮ್ಮೆಯ ವಿಚಾರವಾಗಿದೆ. ಈ ಆಸ್ಪತ್ರೆಯ ಬೆಳವಣಿಗೆಗೆ ಕೆಎಂಸಿ ಆಸ್ಪತ್ರೆ ಕೈ ಜೋಡಿಸಿದೆ ಎಂದರು.

ವೆನ್‌ಲಾಕ್ , ಲೇಡಿಗೋಷನ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ನಡೆಸಲಾಗುವುದು ಎಂದು ದಿನೇಶ್ ಗುಂಡೂ ರಾವ್ ನುಡಿದರು.

ವೆನ್‌ಲಾಕ್, ಲೇಡಿಗೋಷನ್ ಆಸ್ಪತ್ರೆಯ ಅಡಿಪಾಯ ಗಟ್ಟಿಯಾಗಿದೆ. ಪಿಪಿಪ ಮಾದರಿಯಲ್ಲಿ ಅಭಿವೃದ್ಧಿಯಾಗಿದೆ. ಹಳೆ ವಿದ್ಯಾರ್ಥಿಗಳು ಇದರ ಅಭಿವೃದ್ಧಿಗೆ ನೆರವಾಗುವುದರೊಂದಿಗೆ ಜನರಿಗೆ ಇನ್ನಷ್ಟು ಉತ್ತಮ ಸೌಲಭ್ಯ ದೊರೆಯುವಂತಾಗಲಿ ಎಂದು ಹಾರೈಸಿದರು.

ಮಾಜಿ ಮುಖ್ಯ ಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರು ಮಾತನಾಡಿ ವೆನ್‌ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರತ್ಯೇಕ ಪ್ರಾಧಿಕಾರ ರಚನೆ ಆವಶ್ಯಕತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಎರಡೂ ಆಸ್ಪತ್ರೆಗಳ ಅಭಿವೃದ್ಧಿಗೆ ಸಹಕಾರ ನೀಡಿದ ಮಾಜಿ ಸಚಿವರನ್ನು ಹಾಗೂ ಶಾಸಕರನ್ನು, ಸಂಘ ಸಂಸ್ಥೆಗಳ ಧುರೀಣರನ್ನು , ವೈದ್ಯರನ್ನು ಸನ್ಮಾನಿಸಲಾಯಿತು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಮಣಿಪಾಲ ಮಾಹೆ ವಿವಿ ಪ್ರೊ. ಚಾನ್ಸಲರ್ ಡಾ.ಎಚ್.ಎಸ್. ಬಳ್ಳಾಲ್, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮುಖ್ಯ ಅತಿಥಿಯಾಗಿದ್ದರು.

ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಕರ್ನಾಟಕ ರಾಜ್ಯ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಕೃಷ್ಣ ಪಾಲೇಮಾರ್, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಯೋಗೀಶ್ ಭಟ್, ಬಿ.ಎ.ಮೊಯ್ದೀನ್ ಬಾವ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ ಮತ್ತು ಹರೀಶ್ ಕುಮಾರ್, ಡಾ.ಎಂ.ವಿ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್(ರಿ) ಕಾರ್ಯದರ್ಶಿ ಹಿಮಾ ಉರ್ಮಿಳ ಶೆಟ್ಟಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಜೋಸೆಫ್ ಕ್ರಾಸ್ತಾ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಘಟಕದ ಅಧ್ಯಕ್ಷ ಸಿ.ಎ. ಶಾಂತರಾಮ ಶೆಟ್ಟಿ, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ, ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್, ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್, ಕೆಎಂಸಿ ಡೀನ್ ಡಾ.ಬಿ. ಉನ್ನಿ ಕೃಷ್ಣನ್ , 175ನೇ ವರ್ಷಾಚರಣೆ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಎಂ. ಶಾಂತರಾಮ ಶೆಟ್ಟಿ, ಕಾರ್ಯದರ್ಶಿ ಡಾ.ಕೆ.ಆರ್.ಕಾಮತ್, ಕೋಶಾಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಉಪಸ್ಥಿತರಿದ್ದರು.





 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News