×
Ad

ಪುತ್ತೂರು: ನೀರಿನ ತೊಟ್ಟಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Update: 2024-01-17 22:20 IST

ಪುತ್ತೂರು: ಮಹಿಳೆಯೊಬ್ಬರ ಮೃತದೇಹ ಮನೆಯ ಸಮೀಪದ ನೀರಿನ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕೈಕಾರ ಎಂಬಲ್ಲಿ ನಡೆದಿದೆ.

ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿ ಶುಭಲಕ್ಷ್ಮೀ(50) ಮೃತಪಟ್ಟ ಮಹಿಳೆ. ಮನೆಯ ಗುಡ್ಡದ ಮೇಲೆ ಮಣ್ಣಿನ ಟ್ಯಾಂಕಿ ನಿರ್ಮಿಸಿ ಅದಕ್ಕೆ ಟಾರ್ಪಾಲು ಹಾಕಿ ನೀರು ತುಂಬಿಸಲಾಗಿದ್ದ ತೊಟ್ಟಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಗುಡ್ಡದ ಮೇಲೆ ಹೋದ ಶುಭಲಕ್ಷ್ಮೀ ಅವರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಈ ನೀರಿನ ತೊಟ್ಟಿಗೆ ಬಿದ್ದಿದ್ದು, ಆ ಭಾಗದಲ್ಲಿ ಯಾರೂ ಇಲ್ಲದ ಕಾರಣ ನೀರಿನ ತೊಟ್ಟಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ ಮಗಳು ಕಾಲೇಜಿಗೆ ತೆರಳಿದ್ದು, ಪುತ್ರ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಪತಿ ಪ್ರಕಾಶ್ಚಂದ್ರ ರೈ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಮೃತರು ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಅಪ್ಪಯ್ಯ ಮಣಿಯಾಣಿ, ಡಾ.ಪ್ರಸಾದ್ ಭಂಡಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜೀವಂದರ್ ಜೈನ್ ಮತ್ತಿತರು ಭಾಗವಹಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News