ವಿಶ್ವ ಪರಿಸರ ದಿನಾಚರಣೆ: ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ‘ಹಸಿರು ಕ್ರಾಂತಿ’ ಅಭಿಯಾನಕ್ಕೆ ಚಾಲನೆ
ಮಂಗಳೂರು, ಜೂ.5: ಪಡೀಲ್ನಲ್ಲಿ ನೂತನ ನೂತನ ಜಿಲ್ಲಾಧಿಕಾರಿ ಕಚೇರಿಗಾಗಿ ಸುಮಾರು ಏಳೆಂಟು ವರ್ಷಗಳ ಹಿಂದೆ ಅಲ್ಲಿದ್ದ ಸುಮಾರು 500ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಪರಿಸರ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಪರಿಸರಾಸಕ್ತ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾದ್ಯಂತ ಗಿಡ ನೆಡುವ ಪ್ರಸಕ್ತ ಸಾಲಿನ ‘ಹಸಿರು ಕ್ರಾಂತಿ’ ಅಭಿಯಾನಕ್ಕೆ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಡಾ. ಆನಂದ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಪರಿಸರಾಸಕ್ತರಾದ ಡಾ.ಸ್ಮಿತಾ ಹೆಗಡೆ ನೇತೃತ್ವದಲ್ಲಿ ‘ಅಮರ’ ಎಂಬ ಹೆಸರಿನಡಿ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು ಜಿಲ್ಲೆಯಲ್ಲಿ ಸೂಕ್ತ ಪ್ರದೇಶಗಳನ್ನು ಗುರುತಿಸಿ ಗಿಡ ನೆಟ್ಟು ಪೋಷಿಸುವ ಅಭಿಯಾನವನ್ನು ಹಮ್ಮಿಕೊಂಡಿವೆ. ಮಳೆಗಾಲ ಆರಂಭವಾಗಿದ್ದು, ಇದು ಗಿಡಗಳನ್ನು ನೆಡಲು ಸೂಕ್ತ ಹವಾಮಾನ ಎಂದವರು ಹೇಳಿದರು.
ಅರಣ್ಯ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಮಾತನಾಡಿ, ದ.ಕ. ಜಿಲ್ಲಾ ಅರಣ್ಯ ವ್ಯಾಪ್ತಿಯಲ್ಲಿ ಪ್ರತೀ ವರ್ಷ 5 ಲಕ್ಷ ಗಿಡಗಳನ್ನು ನೆಡಲಾಗುತ್ತದೆ. ಈ ವರ್ಷ ಅರಣ್ಯ ಇಲಾಖೆಯು 1.03 ಲಕ್ಷ ಗಿಡಗಳನ್ನು ವಿವಿಧ ಕಡೆ ನೆಡಲು ವಿವಿಧ ಸಂಸ್ಥೆಗಳ ಮೂಲಕ ವಿತರಿಸುತ್ತಿದೆ. ಪ್ರತಿ ವರ್ಷ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ದೇಶಕ್ಕಾಗಿ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಗಿಡಗಳನ್ನು ನೆಡುವ ಕಾರ್ಯ ಅರಣ್ಯ ಇಲಾಖೆಯಿಂದ ನಡೆಯುತ್ತದೆ. ಮಂಗಳೂರು- ಬೆಂಗಳೂರು ನಡುವಿನ ರಸ್ತೆ ಅಭಿವೃದ್ಧಿಗಾಗಿ ಸುಮಾರು 100 ಎಕರೆ ಪ್ರದೇಶದಲ್ಲಿ 1.39 ಲಕ್ಷ ಮರಗಳನ್ನು ಕಡಿಯಲಾಗಿದೆ. ಅಭಿವೃದ್ಧಿಯೂ ಮುಖ್ಯವಾಗಿದ್ದು, ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪ್ರಾಕೃತಿಕ ಸಮಲೋಲನವನ್ನು ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
‘ಅಮರ’ ಅಭಿಯಾನದ ಪ್ರಮುಖರು ಹಾಗೂ ಸಿಎಫ್ ಎಎಲ್ ಸಂಸ್ಥೆಯ ಪ್ರಾಂಶುಪಾಲೆ ಡಾ.ಸ್ಮಿತಾ ಹೆಗಡೆ ಮಾತನಾಡಿ, ‘ಅಮರ ಅಭಿಯಾನದಡಿ ದ.ಕ. ಜಿಲ್ಲೆಯಲ್ಲಿ ಈ ವರ್ಷ ಆಗಸ್ಟ್ ನೊಳಗೆ 10,000 ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಈಗಾಗಹೇ 4,500 ಜಾಗಗಳನು ಗುರುತಿಸಲಾಗಿದೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 350 ಮರಗಳು ಸೇರಿದಂತೆ ನಗರದ ಬಾಳಿಗ ಸ್ಟೋರ್ಸ್ ನಿಂದ ವಿಮಾನ ನಿಲ್ದಾಣ ರಸ್ತೆಯವರೆಗಿನ ಹೆದ್ದಾರಿ ಬದಿ, ರಸ್ತೆ ವಿಭಜಕಗಳಲ್ಲಿ ಗಿಡಗಳನ್ನು ನೆಡಲಾಗುವುದು. ಮುಖ್ಯವಾಗಿ ಸ್ಥಳೀಯವಾಗಿ ಬೆಳೆಯುವ ಹೆಬ್ಬಲಸು, ಮಾವು, ಅಂಟುವಾಳ ಸೇರಿದಂತೆ ಹಣ್ಣಿನ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಅರುಣ್ ಕುಮಾರ್, ಪರಿಸರಾಸಕ್ತರಾದ ಜೀತ್ ಮಿಲನ್, ವಿವಿಧ ಪರಿಸರಾಸಕ್ತ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.