17 ಸಂಸದರಿಗೆ ‘ಸಂಸದ ರತ್ನ’ ಪ್ರಶಸ್ತಿ ಪ್ರದಾನ
PC : PTI
ಹೊಸದಿಲ್ಲಿ,ಜು.26: ಸಂಸದೀಯ ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆಗಾಗಿ ಅನುಭವಿ ಸಂಸದರಾದ ಸುಪ್ರಿಯಾ ಸುಲೆ(ಎನ್‌ಸಿಪಿ-ಎಸ್‌ಪಿ),ರವಿಕಿಶನ್ ಮತ್ತು ನಿಶಿಕಾಂತ್ ದುಬೆ(ಬಿಜೆಪಿ) ಹಾಗೂ ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ) ಸೇರಿದಂತೆ 17 ಸಂಸದರನ್ನು 2025ನೇ ಸಾಲಿನ ಪ್ರತಿಷ್ಠಿತ ‘ಸಂಸದ ರತ್ನ’ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ.
ಈ ವರ್ಷದ ಗೌರವಗಳಲ್ಲಿ 16ನೇ ಲೋಕಸಭೆಯಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸದರಿಗೆ ನಾಲ್ಕು ವಿಶೇಷ ಜ್ಯೂರಿ ಪ್ರಶಸ್ತಿಗಳು ಸೇರಿದ್ದು,ಇವುಗಳನ್ನು ಭರ್ತೃಹರಿ ಹತಾಬ್(ಬಿಜೆಪಿ,ಒಡಿಶಾ),ಎನ್.ಕೆ.ಪ್ರೇಮಚಂದ್ರನ್(ಆರ್‌ಎಸ್‌ಪಿ,ಕೇರಳ),ಸುಪ್ರಿಯಾ ಸುಲೆ (ಎನ್‌ಸಿಪಿ-ಎಸ್‌ಪಿ,ಮಹಾರಾಷ್ಟ್ರ) ಮತ್ತು ಶ್ರೀರಂಗ ಆಪ್ಪಾ ಬಾರಣೆ(ಶಿವಸೇನೆ,ಮಹಾರಾಷ್ಟ್ರ) ಅವರಿಗೆ ನೀಡಲಾಗಿದೆ.
ಇತರ ಪ್ರಶಸ್ತಿ ಪುರಸ್ಕೃತರಲ್ಲಿ ಸ್ಮಿತಾ ಉದಯ್ ವಾಘ್(ಬಿಜೆಪಿ), ನರೇಶ್ ಮಸ್ಕೆ(ಶಿವಸೇನೆ),ವರ್ಷಾ ಗಾಯಕ್ವಾಡ್(ಕಾಂಗ್ರೆಸ್), ಮೇಧಾ ಕುಲಕರ್ಣಿ(ಬಿಜೆಪಿ),ಪ್ರವೀಣ್ ಪಟೇಲ್(ಬಿಜೆಪಿ), ಬಿದ್ಯುತ್ ಬರನ್ ಮಹತೋ(ಬಿಜೆಪಿ),ಸಿ.ಎನ್.ಅಣ್ಣಾದೊರೈ (ಡಿಎಂಕೆ),ಪಿ.ಪಿ.ಚೌಧರಿ(ಬಿಜೆಪಿ) ಮತ್ತು ದಿಲೀಪ್ ಸೈಕಿಯಾ(ಬಿಜೆಪಿ) ಸೇರಿದ್ದಾರೆ. ಆಯ್ಕೆಯು ಚರ್ಚೆಗಳು,ಖಾಸಗಿ ಸದಸ್ಯರ ಮಸೂದೆಗಳು,ಕೇಳಿದ ಪ್ರಶ್ನೆಗಳು ಮತ್ತು ಹಾಜರಾತಿಯಲ್ಲಿ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ.
ಸಮಿತಿಗಳ ವಿಭಾಗದಲ್ಲಿ ಭರ್ತೃಹರಿ ಮಹತಾಬ್(ಬಿಜೆಪಿ) ಅಧ್ಯಕ್ಷತೆಯ ಹಣಕಾಸು ಸ್ಥಾಯಿ ಸಮಿತಿ ಮತ್ತು ಡಾ.ಚರಣಜಿತ್ ಸಿಂಗ್ ಚನ್ನಿ(ಕಾಂಗ್ರೆಸ್) ನೇತೃತ್ವದ ಕೃಷಿ ಸ್ಥಾಯಿ ಸಮಿತಿಗಳು ಪ್ರಶಸ್ತಿಗೆ ಭಾಜನವಾಗಿವೆ.
ಸಂಸದೀಯ ಶ್ರೇಷ್ಠತೆಗೆ ಸಾಂಸ್ಥಿಕ ಮಾನ್ಯತೆಯನ್ನು ಪ್ರತಿಪಾದಿಸಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಶಿಫಾರಸಿನ ಮೇರೆಗೆ ಸಂಸದ ರತ್ನ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿತ್ತು.