×
Ad

77 ಶೇ. ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಿಗಳಿಗೆ ಸೇರಿದವರು: ಸಂಸತ್‌ ಗೆ ಕಾನೂನು ಸಚಿವರಿಂದ ಮಾಹಿತಿ

Update: 2025-03-26 20:45 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: 2018ರ ಬಳಿಕ ಹೈಕೋರ್ಟ್‌ಗಳಿಗೆ ನೇಮಕಗೊಂಡಿರುವ ನ್ಯಾಯಾಧೀಶರ ಪೈಕಿ 77 ಶೇಕಡ ಮೇಲ್ಜಾತಿಗಳಿಗೆ ಸೇರಿದವರು ಎಂದು ಕಾನೂನು ಸಚಿವಾಲಯ ಬುಧವಾರ ಸಂಸತ್‌ ಗೆ ಮಾಹಿತಿ ನೀಡಿದೆ. ಇದಕ್ಕೆ ಹೋಲಿಸಿದರೆ, ಪರಿಶಿಷ್ಟ ಜಾತಿಯ 3 ಶೇಕಡ, ಪರಿಶಿಷ್ಟ ಪಂಗಡದ 2 ಶೇಕಡ, ಇತರ ಹಿಂದುಳಿದ ವರ್ಗ (ಒಬಿಸಿ)ಗಳ 12 ಶೇಕಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ 5 ಶೇಕಡ ನ್ಯಾಯಾಧೀಸರು ಹೈಕೋರ್ಟ್‌ಗಳಿಗೆ ನೇಮಕಗೊಂಡಿದ್ದಾರೆ ಎಂದು ಅದು ತಿಳಿಸಿದೆ.

2018ರ ಬಳಿಕ, ಹೈಕೋರ್ಟ್ ನ್ಯಾಯಾಧೀಶ ಹುದ್ದೆಗಳಿಗೆ ನೇಮಕಗೊಳ್ಳುವವರು ತಮ್ಮ ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಬೇಕಾಗಿದೆ.

ನ್ಯಾಯಾಂಗದಲ್ಲಿ ವೈವಿಧ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಕುಮಾರ್ ಝಾ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ಕುಮಾರ್ ಮೇಘವಾಲ್, ‘‘2018ರ ಬಳಿಕ ನೇಮಕಗೊಂಡಿರುವ 715 ಹೈಕೋರ್ಟ್ ನ್ಯಾಯಾಧೀಶರ ಪೈಕಿ 551 ಮಂದಿ ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ. ಉಳಿದಂತೆ, 22 ಮಂದಿ ಪರಿಶಿಷ್ಟ ಜಾತಿ, 16 ಮಂದಿ ಪರಿಶಿಷ್ಟ ಪಂಗಡ, 89 ಮಂದಿ ಒಬಿಸಿ ವರ್ಗ ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ್ದಾರೆ’’ ಎಂದು ತಿಳಿಸಿದರು.

ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವ ಜವಾಬ್ದಾರಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳದ್ದಾಗಿದೆ ಎಂದು ಹೇಳಿದ ಸಚಿವರು, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು.

ನ್ಯಾಯಾಧೀಶರ ನೇಮಕಾತಿಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುವ ಹೊಣೆ ಸುಪ್ರೀಂ ಕೋರ್ಟ್‌ನದ್ದಾಗಿದೆ ಎಂದು ಹೇಳಿದ ಅವರು, ‘‘ಸುಪ್ರೀಂ ಕೋರ್ಟ್ ಕೊಲೀಜಿಯಮ್‌ನಿಂದ ಶಿಫಾರಸುಗೊಂಡಿರುವ ನ್ಯಾಯಾಧೀಶರು ಮಾತ್ರ ಸುಪ್ರೀಂ ಕೋಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರಾಗುತ್ತಾರೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News