×
Ad

ರಾಜಸ್ಥಾನದ ಉದಯಪುರದಲ್ಲಿ ವಿದ್ಯಾರ್ಥಿಗೆ ಚೂರಿಯಿರಿತ | ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಸ್ಥಗಿತ

Update: 2024-08-17 20:44 IST

PC : PTI 

ಉದಯಪುರ : ಶುಕ್ರವಾರ ಇಲ್ಲಿಯ ಸರಕಾರಿ ಶಾಲೆಯೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಯನ್ನು ಚೂರಿಯಿಂದ ಇರಿದ ಬಳಿಕ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ರಾಜಸ್ಥಾನ ಸರಕಾರವು ನಗರದಲ್ಲಿ ಅಂತರ್ಜಾಲವನ್ನು ಸ್ಥಗಿತಗೊಳಿಸಿದೆ. ಶನಿವಾರ ನಗರದಲ್ಲಿಯ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು,ಹೆಚ್ಚಿನ ಅಂಗಡಿ-ಮುಂಗಟ್ಟುಗಳು ತೆರೆದಿರಲಿಲ್ಲ. ನಗರದಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ನಗರದ ಭಟ್ಟಿಯಾನಿ ಚೋಹಟ್ಟಾದಲ್ಲಿಯ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಕ್ಕಳು ಪರಸ್ಪರ ಹೊಡೆದಾಡಿಕೊಂಡಿದ್ದು,ಈ ವೇಳೆ ಓರ್ವ ವಿದ್ಯಾರ್ಥಿ ಇನ್ನೋರ್ವನ ತೊಡೆಗೆ ಚೂರಿಯಿಂದ ಇರಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆತನ ದೇಹಸ್ಥಿತಿ ಈಗ ಸ್ಥಿರವಾಗಿದೆ. ಆರೋಪಿ ವಿದ್ಯಾರ್ಥಿ ಮತ್ತು ಆತನ ತಂದೆಯನ್ನು ಬಂಧಿಸಲಾಗಿದೆ. ಇತರ ಯಾವುದೇ ವ್ಯಕ್ತಿ ಅಥವಾ ವಿದ್ಯಾರ್ಥಿ ಘಟನೆಯಲ್ಲಿ ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಉದಯಪುರ ಜಿಲ್ಲಾಧಿಕಾರಿ ಅರವಿಂದ ಪೋಸ್ವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಶುಕ್ರವಾರ ಬಾಲಕನಿಗೆ ಚೂರಿಯಿರಿತದ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಗುಂಪೊಂದು ಕಲ್ಲು ತೂರಾಟ ನಡೆಸಿ 3-4 ಕಾರುಗಳಿಗೆ ಬೆಂಕಿ ಹಚ್ಚಿದೆ. ಸಂಜೆಯಾಗುತ್ತಿದ್ದಂತೆ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಪ್ರಮುಖ ಪ್ರದೇಶಗಳಲ್ಲಿಯ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಬಾಲಕನನ್ನು ದಾಖಲಿಸಲಾದ ಜಿಲ್ಲಾಸ್ಪತ್ರೆಯ ಹೊರಗೆ ಸೇರಿದ್ದ ನೂರಾರು ಜನರನ್ನು ಪೋಲಿಸರು ಚದುರಿಸಿದರು.

ಉದ್ವಿಗ್ನತೆ ಹೊಗೆಯಾಡುತ್ತಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News