×
Ad

ಅಕ್ರಮ ದಾಸ್ತಾನಿಗೆ ತಡೆ; LPG ಸಿಲಿಂಡರ್ ಬುಕಿಂಗ್ ಅವಧಿ 25 ದಿನಗಳಿಗೆ ವಿಸ್ತರಿಸಿದ ಕೇಂದ್ರ

Update: 2026-03-09 21:46 IST

ಸಾಂದರ್ಭಿಕ ಚಿತ್ರ | Photo Credit : NDTV 

ಹೊಸದಿಲ್ಲಿ,ಮಾ.9: ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು LPG ಸಿಲಿಂಡರ್ ಗಳ ಬುಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸರಕಾರಿ ಮೂಲಗಳು ಸೋಮವಾರ ತಿಳಿಸಿವೆ.

ಈ ಹಿಂದೆ 55 ದಿನಗಳಿಗೊಮ್ಮೆ LPG ಸಿಲಿಂಡರ್ ಗಳನ್ನು ಬುಕ್ ಮಾಡಿದವರೂ ಈಗ 15 ದಿನಗಳಲ್ಲಿ ಸಿಲಿಂಡರ್ ಗಳನ್ನು ಬುಕ್ ಮಾಡಲು ಆರಂಭಿಸಿರುವ ನಿದರ್ಶನಗಳು ಬೆಳಕಿಗೆ ಬಂದಿವೆ ಎಂದು ಅವು ಹೇಳಿವೆ.

ಗೃಹಬಳಕೆ ಗ್ರಾಹಕರಿಗೆ ಯಾವಾಗಲೂ ಆದ್ಯತೆ ನೀಡಲಾಗುತ್ತದೆ ಎಂದು ದೃಢಪಡಿಸಿದ ಮೂಲಗಳು,ಭಾರತವು ಇನ್ನಷ್ಟು LPG ಪೂರೈಕೆದಾರರನ್ನು ಅನ್ವೇಷಿಸುತ್ತಿದ್ದು, ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆಯಂತಹ ದೇಶಗಳು LPG ಮಾರಾಟಕ್ಕಾಗಿ ಭಾರತವನ್ನು ಸಂಪರ್ಕಿಸಿವೆ ಎಂದು ತಿಳಿಸಿದವು.

ಭಾರತದ ಬಳಿ ಸಾಕಷ್ಟು ದಾಸ್ತಾನು ಇರುವುದರಿಂದ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ 130 ಡಾಲರ್ ಗಳನ್ನು ದಾಟುವವರೆಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ಏರುವ ಸಾಧ್ಯತೆಯಿಲ್ಲ ಎಂದು ತಿಳಿಸಿದ ಸರಕಾರಿ ಮೂಲಗಳು,ಕಚ್ಚಾತೈಲ ಬೆಲೆಗಳು ಪ್ರತಿ ಡಾಲರ್ ಗೆ 100ರ ಆಸುಪಾಸಿನಲ್ಲಿರಲಿವೆ ಎಂದು ನಾವು ನಿರೀಕ್ಷಿಸಿದ್ದೇವೆ. ದೇಶದ ಯಾವುದೇ ಪೆಟ್ರೋಲ್ ಪಂಪ್ ನಲ್ಲಿ ಇಂಧನ ಕೊರತೆಯಿಲ್ಲ ಎಂದು ಹೇಳಿದವು.

ಹಾರ್ಮುಝ್ ಜಲಸಂಧಿಯ ಬದಲು ಇತರ ಸಮುದ್ರಮಾರ್ಗಗಳ ಮೂಲಕ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಲಾಗುತ್ತಿದೆ ಎಂದ ಮೂಲಗಳು, ಭಾರತದಲ್ಲಿ ವಿಮಾನ ಇಂಧನ ಸಾಕಷ್ಟು ದಾಸ್ತಾನಿದೆ. ಭಾರತವು ಎಟಿಎಫ್ನ ಉತ್ಪಾದಕ ಮತ್ತು ರಫ್ತುದಾರನಾಗಿದೆ, ಹೀಗಾಗಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದವು.

ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅನುಕೂಲಕರ ಸ್ಥಿತಿಯಲ್ಲಿದೆ ಎಂದು ಅವು ಒತ್ತಿ ಹೇಳಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News