ಬಹರೈನ್ ನಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಕ್ರಮ; ಸೌದಿ ಮೂಲಕ ಸ್ವದೇಶಕ್ಕೆ
ಸಾಂದರ್ಭಿಕ ಚಿತ್ರ PC: x.com/NewsArenaIndia
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹರೈನ್ ವಿಮಾನ ನಿಲ್ದಾಣ ಫೆಬ್ರುವರಿ 28ರಿಂದಲೇ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಅತಂತ್ರರಾಗಿರುವ ಭಾರತೀಯರ ರಕ್ಷಣೆಗೆ ರಾಯಭಾರ ಕಚೇರಿ ಮುಂದಾಗಿದ್ದು, ಸೌದಿ ಅರೇಬಿಯಾ ಮೂಲಕ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಾಸು ಕರೆತರಲು ಕ್ರಮ ಕೈಗೊಂಡಿದೆ.
"ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಅತಂತ್ರರಾಗಿರುವ ಭಾರತೀಯರಿಗೆ ವೈಯಕ್ತಿಕ ಟ್ರಾನ್ಸಿಸ್ಟ್ ವೀಸಾ ಅನುಮೋದನೆಯನ್ನು ಸೌದಿ ಸರ್ಕಾರದಿಂದ ಪಡೆಯುತ್ತಿದೆ. ಬಹರೈನ್ ಭಾರತೀಯ ರಾಯಭಾರ ಕಚೇರಿಯಿಂದ ಬಂದ ಟ್ರಾನ್ಸಿಸ್ಟ್ ವೀಸಾ ಮನವಿಗಳನ್ನು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗುತ್ತಿದೆ. ಅತಂತ್ರರಾಗಿರುವ ಭಾರತೀಯರಿಗೆಅದರಲ್ಲೂ ಮುಖ್ಯವಾಗಿ ಪ್ರವಾಸಿ ವೀಸಾ ಮತ್ತು ಅಲ್ಪಾವಧಿ ವೀಸಾ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ" ಎಂದು ಬಹರೈನ್ ನಲ್ಲಿರುವ ಭಾರತೀಯ ರಾಯಭಾರಿ ವಿನೋದ್ ಕೆ.ಜಾಕೋಬ್ ಹೇಳಿದ್ದಾರೆ.
ಬಹರೈನ್ ನಲ್ಲಿ ಅತಂತ್ರರಾಗಿರುವ ಭಾರತೀಯರಿಗೆ ಸದ್ಯಕ್ಕೆ ಉಳಿದಿರುವ ಏಕೈಕ ಕಾರ್ಯಸಾಧು ಮಾರ್ಗವೆಂದರೆ ಸೌದಿಯ ಮೂಲಕ ವಾಪಸ್ಸಾಗುವುದು. ಸೌದಿ ಟ್ರಾನ್ಸಿಸ್ಟ್ ವೀಸಾಗೆ ಮನವಿ ಮಾಡಿದವರು ಭಾರತ ಪ್ರಯಾಣಕ್ಕೆ ದೃಢೀಕೃತ ವಿಮಾನ ಟಿಕೆಟ್ ಹೊಂದಿರುವುದು ಹೀಗೆ ಕೆಲ ನಿರ್ದಿಷ್ಟ ಪೂರ್ವ ಷರತ್ತುಗಳನ್ನು ಪಾಲಿಸಬೇಕು. ಸೌದಿ ಟ್ರಾನ್ಸಿಸ್ಟ್ ವೀಸಾಗಳು 72-96 ಗಂಟೆಯ ಅವಧಿಯದ್ದಾಗಿದ್ದು, ಈ ಅವಧಿಯೊಳಗೆ ಪ್ರಯಾಣಿಕರು ದೇಶ ಬಿಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ನೆರೆಯ ಕತಾರ್ ಇನ್ನೊಂದೆಡೆ ಭಾರತ ಸೇರಿದಂತೆ ವಿವಿಧೆಡೆಗಳಿಗೆ ಹಲವು ವಿಮಾನಗಳನ್ನು ಆರಂಭಿಸಿದೆ. ಆದರೆ ಅಗತ್ಯಕ್ಕಿಂತ ಕಡಿಮೆ ಇರುವುದರಿಂದ ಸೌದಿಯ ಮೂಲಕ ಪ್ರಯಾಣಿಸುವುದು ಭಾರತೀಯರಿಗೆ ಪ್ಲಾನ್ ಬಿ ಆಯ್ಕೆಯಾಗಿದೆ. ಇದರಿಂದ ಟ್ರಾನ್ಸಿಸ್ಟ್ ವೀಸಾಗಳನ್ನು ಪಡೆಯುವ ಧಾವಂತ ಹೆಚ್ಚಿದೆ.