×
Ad

ಭಾರತ-ಪಾಕ್ ಸಂಘರ್ಷದ ಕುರಿತು ಟ್ರಂಪ್ ಪುನರಾವರ್ತಿತ ಹೇಳಿಕೆ : ಸಂಸತ್ತಿನಲ್ಲಿ ಸ್ಪಷ್ಟನೆ ನೀಡುವಂತೆ ಪ್ರಧಾನಿಗೆ ಕಾಂಗ್ರೆಸ್ ಆಗ್ರಹ

Update: 2025-07-19 12:20 IST

ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ (PTI)

ಹೊಸದಿಲ್ಲಿ : ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಹೇಳಿಕೆಗಳನ್ನು ಪುನರಾವರ್ತಿಸುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ʼನಾವು ಬಹಳಷ್ಟು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡವೆ ಯದ್ಧ ನಡೆಯುತ್ತಿತ್ತು. ಹಾರಾಟದ ಸಂದರ್ಭದಲ್ಲೇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ವಾಸ್ತವವಾಗಿ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆʼ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ವಿರೋಧ ಪಕ್ಷಗಳು ಸ್ಪಷ್ಟನೆ ನೀಡುವಂತೆ ಪ್ರಧಾನಿಗೆ ಆಗ್ರಹಿಸಿದೆ.

ʼನೀವು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುತ್ತೀರಿ. ನೀವು ಯುದ್ಧ ಮುಂದುವರಿಸುವುದಾದರೆ ನಾವು ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಕ್ಕೆ ಹೇಳಿರುವುದಾಗಿʼ ಟ್ರಂಪ್ ಹೇಳಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್, ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಕೇವಲ ಎರಡು ದಿನಗಳ ಮೊದಲು ಅದೇ ಎರಡು ಸಂದೇಶಗಳೊಂದಿಗೆ ʼಟ್ರಂಪ್ ಕ್ಷಿಪಣಿʼ 24ನೇ ಬಾರಿಗೆ ಉಡಾಯಿಸಲ್ಪಟ್ಟಿದೆ ಎಂದು ಹೇಳಿದ್ದಾರೆ.

ಅದರಲ್ಲಿ ಒಂದು ಅಣ್ವಸ್ತ್ರಗಳನ್ನು ಹೊಂದಿರುವ ಭಾರತ- ಪಾಕ್ ನಡುವಿನ ಯುದ್ಧವನ್ನು ಅಮೆರಿಕ ನಿಲ್ಲಿಸಿದೆ ಎಂದಾಗಿದೆ. ಇನ್ನೊಂದು ಯುದ್ಧ ಮುಂದುವರಿದರೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ಅಮೆರಿಕ ಜೊತೆ ವ್ಯಾಪಾರ ಒಪ್ಪಂದವನ್ನು ಬಯಸಿದರೆ, ತಕ್ಷಣ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು ಎಂಬುದಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಭಾರತ –ಪಾಕ್ ಸಂಘರ್ಷದ ವೇಳೆ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಈಗ ಮತ್ತೆ ಹೇಳುತ್ತಿದ್ದಾರೆ. 2019ರ ಸೆಪ್ಟೆಂಬರ್‌ನಲ್ಲಿ ʼಹೌಡಿ ಮೋದಿʼ ಮತ್ತು 2020ರ ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್ ಮೂಲಕ ಟ್ರಂಪ್ ಅವರೊಂದಿಗೆ ಸ್ನೇಹ ಮತ್ತು ಗೆಳೆತನವನ್ನು ಹೊಂದಿರುವ ಪ್ರಧಾನಿ, ಟ್ರಂಪ್ ಕಳೆದ 70 ದಿನಗಳಿಂದ ಏನು ಹೇಳಿಕೊಂಡು ಬರುತ್ತಿದ್ದಾರೆ ಎಂಬ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕಾಗಿದೆ ಎಂದು ಜೈ ರಾಮ್ ರಮೇಶ್ ಹೇಳಿದ್ದಾರೆ.

ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಟ್ರಂಪ್ ಅವರ ಭಾರತ-ಪಾಕಿಸ್ತಾನ ಕದನ ವಿರಾಮದ ಹೇಳಿಕೆಗಳಿಗೆ ಮೋದಿ ಉತ್ತರಿಸಬೇಕಿದೆ ಎಂದು ಕಾಂಗ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News