×
Ad

ಏರ್ ಇಂಡಿಯಾ ವಿಮಾನ ದುರಂತ : ಅವಶೇಷಗಳಡಿ ಆಭರಣ, ಫೋನ್‌ಗಳು ಸೇರಿದಂತೆ ಬೆಳೆಬಾಳುವ ವಸ್ತುಗಳು ಪತ್ತೆ

Update: 2025-06-15 12:10 IST

Photo | indianexpress

ಅಹ್ಮದಾಬಾದ್ : ಏರ್ ಇಂಡಿಯಾ ವಿಮಾನ ದುರಂತ ಸ್ಥಳದಲ್ಲಿ ಆಭರಣಗಳು, ಪಾಸ್ಪೋರ್ಟ್‌ಗಳು, ಫೋನ್‌ಗಳು ಸೇರಿದಂತೆ ಬೆಳೆಬಾಳುವ ವಸ್ತುಗಳು ಪತ್ತೆಯಾಗಿದೆ. ಮೃತದೇಹಗಳ ಗುರುತು ಪತ್ತೆ ಬಳಿಕ ಅವುಗಳ ವಾರೀಸುದಾರರನ್ನು ಪತ್ತೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.

ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಸ್ಥಳದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ನರೋಡಾ ಪೊಲೀಸ್ ಠಾಣೆಯಲ್ಲಿ ದುರಂತ ಸ್ಥಳದಲ್ಲಿ ಸಿಕ್ಕಿದ ಆಭರಣಗಳು, ಪಾಸ್ಪೋರ್ಟ್‌ಗಳು, ಫೋನ್‌ಗಳನ್ನು ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ಭದ್ರವಾಗಿಡಲಾಗಿದೆ.

ಅಪಘಾತದಲ್ಲಿ ಮೃತಪಟ್ಟ 241 ಪ್ರಯಾಣಿಕರು, ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳ ಮೃತದೇಹಗಳನ್ನು ಗುರುತಿಸಿದ ನಂತರ ಈ ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ ಮತ್ತು ಸರಿಯಾದ ಪರಿಶೀಲನೆಯ ನಂತರ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ indianexpress ವರದಿ ಮಾಡಿದೆ.

ಸದ್ಯಕ್ಕೆ ಅವುಗಳನ್ನು ʼಮುದ್ದಮಾಲ್ʼ(ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಆಸ್ತಿ) ಎಂದು ಪರಿಗಣಿಸಲಾಗುತ್ತದೆ. ವಿಧಿವಿಜ್ಞಾನ ತಜ್ಞರು ಪರೀಕ್ಷಿಸಿ ಪಂಚನಾಮ ಮಾಡಿದ ಬಳಿಕ ಪ್ಲಾಸ್ಟಿಕ್ ಪಾತ್ರೆಗಳೊಳಗೆ ಲಾಕ್ ಮಾಡಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ದುರಂತಕ್ಕೆ ಸಂಬಂಧಿಸಿ ಮೇಘನಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳ ಮೇಘನಿನಗರ ಠಾಣೆ ವ್ಯಾಪ್ತಿಯಲ್ಲಿದೆ. ಆದರೆ, ನರೋಡಾ ಪೊಲೀಸ್ ಠಾಣೆಗೆ ಈ ವಸ್ತುಗಳ ಉಸ್ತುವಾರಿ ವಹಿಸಲಾಗಿದೆ.

ಮೇಘನಿನಗರ ಠಾಣಾ ಸಿಬ್ಬಂದಿ ಬಂದೋಬಸ್ತ್ ಮತ್ತು ಇತರ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಉಳಿದ ಪ್ರಕ್ರಿಯೆಗಳ ಜವಾಬ್ಧಾರಿಯನ್ನು ನರೋಡಾ ಠಾಣಾ ಸಿಬ್ಬಂದಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೃತದೇಹಗಳು ಮತ್ತು ವಸ್ತುಗಳನ್ನು ಗುರುತಿಸುವ ಮತ್ತು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಅಹ್ಮದಾಬಾದ್‌ ನಗರ ಪೊಲೀಸರ ಸಹಾಯದಿಂದ ಏರ್ ಇಂಡಿಯಾ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ವಿಮಾನದ ಕಾರ್ಗೋದಲ್ಲಿರುವ ಬ್ಯಾಗ್‌ಗಳು ಏರ್‌ಲೈನ್ಸ್‌ ವಶದಲ್ಲಿವೆ.

ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಇರಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಹೊಂದಾಣಿಕೆ ಬಳಿಕ ಬ್ಯಾಗ್‌ಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News