ಅಸ್ಸಾಂ | ಮುಂದುವರಿದ ಪ್ರವಾಹ ಪರಿಸ್ಥಿತಿ; 10 ಜಿಲ್ಲೆಗಳಲ್ಲಿ 6 ಲಕ್ಷ ಸಂತ್ರಸ್ತರು
ಸಾಂದರ್ಭಿಕ ಚಿತ್ರ | PTI
ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ರವಿವಾರವೂ ಮುಂದುವರಿದಿದ್ದು, ರಾಜ್ಯದ 10 ಜಿಲ್ಲೆಗಳಲ್ಲಿ ಸುಮಾರು 6 ಲಕ್ಷ ಮಂದಿ ನೆರೆಪೀಡಿತರಾಗಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಹಲವಾರು ಪ್ರದೇಶಗಳಲ್ಲಿ ಜನರನ್ನು ತೆರವುಗೊಳಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ರಾಜ್ಯದ ಕೊಪಿಲಿ, ಬಾರಾಕ್ ಹಾಗೂ ಕುಶಿಯಾರಾ ನದಗಿಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಹೈಲಾಕಾಂಡಿ ಹೊಜಾಯ್, ಮೊರಿಗಾಂವ್, ಕರೀಂಗಂಜ್, ನಾಗಾಂವ್, ಕಾಚಾರ್, ದಿಬ್ರೂಗಡ, ಗೋಲಾಘಾಟ್, ಕರ್ಬಿ ಆಂಗ್ಲಾಂಗ್ ಪಶ್ಚಿಮ ಹಾಗೂ ದಿಮಾ ಹಸಾವೊ ಜಿಲ್ಲೆಗಳಲ್ಲಿ ಸುಮಾರು 6,01,642 ಮಂದಿ ಪ್ರವಾಹ ಪೀಡಿತರಾಗಿದ್ದಾರೆಂದು ಅವರು ತಿಳಿಸಿದ್ದಾರೆ.
ಮೇ 28ರಿಂದೀಚೆಗೆ ಅಸ್ಸಾಂನ ವಿವಿಧೆಡೆ ಪ್ರವಾಹ ಹಾಗೂ ಬಿರುಗಾಳಿಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ತೀರ ಪ್ರದೇಶಗಳಲ್ಲಿ ವಾಸವಾಗಿರುವ 40 ಸಾವಿರಕ್ಕೂ ಅಧಿಕ ಮಂದಿಯನ್ನು ತೆರವುಗೊಳಿಸಲಾಗಿದ್ದು ಅವರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್, ಸ್ಥಳೀಯಾಡಳಿತಗಳು ನಾಗರಿಕ ಸಹಕಾರದೊಂದಿಗೆ ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ರಾಜ್ಯದ ಹಲವು ಭಾಗಗಳಲ್ಲಿ ರಸ್ತೆ ಹಾಗೂ ರೈಲು ಸಂಪರ್ಕ ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಹಾಫ್ಲೊಂಗ್‌ನ ಚಂದ್ರನಾಧಪುರ ಸೆಕ್ಷನ್ ಹಾಗೂ ಲುಮ್‌ಡಿಂಗ್ ವಿಭಾಗದ ಸಿಲ್ಚಾರ್ ರೈಲು ನಿಲ್ದಾಣಗಳ ನಡುವೆ ರೈಲುಹಳಿಗಳು ನೆರೆನೀರಿನಲ್ಲಿ ಮುಳುಗಿರುವುದರಿಂದ ಶನಿವಾರದಿಂದ ಸೋಮವಾರದವರೆಗೆ ಕನಿಷ್ಠ 10 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆಯೆಂದು ಈಶಾನ್ಯ ರೈಲ್ವೆ ವಕ್ತಾರರು ತಿಳಿಸಿದ್ದಾರೆ.