ತಿರುಪತಿ ಲಡ್ಡಿಗೆ ಕಲಬೆರಕೆ ತುಪ್ಪ ಬಳಕೆ ಪ್ರಕರಣ: ಸಿಬಿಐನಿಂದ 4 ಮಂದಿಯ ಬಂಧನ
PC: x.com/ggganeshh
ತಿರುಪತಿ: ಪ್ರಸಾದರೂಪದಲ್ಲಿ ಭಕ್ತರಿಗೆ ನೀಡುವ ಪ್ರಸಿದ್ಧ ತಿರುಪತಿ ಲಡ್ಡಿಗೆ ಕಲಬೆರಕೆ ತುಪ್ಪ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ ಭಾನುವಾರ ತಮಿಳುನಾಡು ಡೈರಿಯ ವ್ಯವಸ್ಥಾಪಕ ನಿದೇರ್ಶಕ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದೆ.
ದುಂಡಿಗಲ್ನ ಎ.ಆರ್.ಡೈರಿಯ ವ್ಯವಸ್ಥಾಪಕ ನಿರ್ದೇಶಕ ಆರ್.ರಾಜಶೇಖರನ್, ಉತ್ತರಾಖಂಡ ಮೂಲದ ಭೋಲೆ ಬಾಬಾ ಡೈರಿಯ ವಿಪಿನ್ ಜೈನ್ ಹಾಗೂ ಪೊಮಿಲ್ ಜೈನ್, ನೆಲ್ಲೋರ್ ವೈಷ್ಣವಿ ಡೈರಿಯ ಅಪೂರ್ವ ಚೌಡ ಬಂಧಿತರು.
ಈ ನಾಲ್ಕು ಮಂದಿಯನ್ನು ಸತತ ಮೂರು ದಿನಗಳಿಂದ ವಿಚಾರಣೆಗೆ ಗುರಿಪಡಿಸಿದ ಬಳಿಕ ಸಿಬಿಐ ಬಂಧಿಸಿದೆ. ಬಂಧಿತರನ್ನು ತಿರುಪತಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗಿದೆ. ತುಪ್ಪದ ಪೂರೈಕೆಯಲ್ಲಿ ಗಂಭೀರ ಪ್ರಮಾಣದ ನಿಯಮ ಉಲ್ಲಂಘನೆಗಳನ್ನು ಸಿಬಿಐ ಪತ್ತೆ ಮಾಡಿದ್ದು, ಹೆಜ್ಜೆ ಹೆಜ್ಜೆಗೂ ಅಕ್ರಮಗಳು ನಡೆದಿವೆ ಎಂದು ಪತ್ತೆ ಮಾಡಿದೆ.
ವೈಎಸ್ಆರ್ಪಿ ಸರ್ಕಾರದ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕಳೆದ ಸೆಪ್ಟೆಂಬರ್ನಲ್ಲಿ ಆಪಾದಿಸಿದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತ್ತು. ಈ ಆರೋಪಕ್ಕೆ ಪೂರಕವಾಗಿ ಪ್ರಯೋಗಾಲಯ ವರದಿಯನ್ನು ಟಿಡಿಪಿ ಮುಖಂಡ ಬಿಡುಗಡೆ ಮಾಡಿದ್ದು, ಇದನ್ನು ವೈಸ್ಆರ್ಸಿಪಿ ನಿರಾಕರಿಸಿ, ಪಕ್ಷಕ್ಕೆ ಕಳಂಕ ತರುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ ಎಂದು ಹೇಳಿತ್ತು.
ಈ ಪ್ರಕರಣದ ಬಳಿಕ ತಿರುಮಲ ತಿರುಪತಿ ದೇವಸ್ಥಾನಂ, ಎ.ಆರ್.ಡೈರಿಯನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ವಿರುದ್ಧ ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ರಾಜ್ಯ ಸರ್ಕಾರ ತನಿಖೆ ಆರಂಭಿಸಿದ್ದು, ಈ ಪ್ರಕರಣ ಸುಪ್ರೀಂಕೋರ್ಟ್ ಕಟ್ಟೆ ಏರಿದಾಗ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಬಿಐನ ವಿಶೇಷ ತನಿಖಾ ತಂಡಕ್ಕೆ ಆದೇಶ ಮಾಡಿತ್ತು.