×
Ad

ಭಾರತವು ಅತ್ಯಂತ ಸಮಾನ ದೇಶಗಳಲ್ಲೊಂದು ಎಂಬ ಸರಕಾರದ ಹೇಳಿಕೆಗೆ ಕಾಂಗ್ರೆಸ್ ತರಾಟೆ

Update: 2025-07-07 21:30 IST

ಜೈರಾಮ್ ರಮೇಶ್‌ | PC : PTI 

ಹೊಸದಿಲ್ಲಿ: ವಿಶ್ವಬ್ಯಾಂಕ್ ವರದಿಯನ್ನು ತಪ್ಪಾಗಿ ವ್ಯಾಖ್ಯಾನಿಸಿ ಭಾರತವು ವಿಶ್ವದ ಅತ್ಯಂತ ಹೆಚ್ಚು ಸಮಾನತೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿದ್ದಕ್ಕಾಗಿ ಕೇಂದ್ರವನ್ನು ಕಾಂಗ್ರೆಸ್ ಸೋಮವಾರ ತರಾಟೆಗೆತ್ತಿಕೊಂಡಿದೆ.

2011-12 ಮತ್ತು 2022-23ರ ನಡುವೆ ಭಾರತದಲ್ಲಿ ಅಸಮಾನತೆಯು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಅದು ಜಾಗತಿಕವಾಗಿ ನಾಲ್ಕನೇ ಅತ್ಯಂತ ಸಮಾನ ದೇಶವಾಗಿದೆ ಎಂದು ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ(ಪಿಐಬಿ) ಶನಿವಾರ ಹೇಳಿಕೆಯನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಆಕ್ರೋಶ ಹೊರಬಿದ್ದಿದೆ.

ಪಿಐಬಿ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ ಉಸ್ತುವಾರಿ) ಜೈರಾಮ್ ರಮೇಶ್‌ ಅವರು, ಸಮರ್ಥನೀಯವಲ್ಲದ ಅಚ್ಚರಿದಾಯಕ ಹೇಳಿಕೆಗಾಗಿ ಬಿಜೆಪಿ ನೇತೃತ್ವದ ಕೇಂದ್ರವನ್ನು ಟೀಕಿಸಿದ್ದಾರೆ.

ವಿಶ್ವಬ್ಯಾಂಕ್ ತನ್ನ ಎಪ್ರಿಲ್ 2025ರ ವರದಿಯಲ್ಲಿ ಭಾರತದಲ್ಲಿ ಬಡತನ ಮತ್ತು ಅಸಮಾನತೆಯನ್ನು ಬೆಟ್ಟು ಮಾಡಿತ್ತು ಹಾಗೂ ಸರಕಾರವು ಅಸಮಾನತೆಯನ್ನು ಕೀಳಂದಾಜಿಸುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ವಿಶ್ವಬ್ಯಾಂಕಿನ ಹಲವಾರು ಎಚ್ಚರಿಕೆಗಳನ್ನು ಗುರುತಿಸಿ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು. ಈ ಕಳವಳಗಳು ಈಗಲೂ ಪ್ರಸ್ತುತವಾಗಿವೆ. ವಿಶ್ವಬ್ಯಾಂಕ್ ವರದಿಯ ಬಿಡುಗಡೆಯ ಮೂರು ತಿಂಗಳುಗಳ ಬಳಿಕ ಈಗ ಅದನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ಪಿಐಬಿಯಲ್ಲಿನ ಮೋದಿ ಸರಕಾರದ ಭಟ್ಟಂಗಿಗಳು ಭಾರತವು ವಿಶ್ವದ ಅತ್ಯಂತ ಸಮಾನ ಸಮಾಜಗಳಲ್ಲಿ ಒಂದಾಗಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ಹೊರಡಿಸಿದ್ದಾರೆ ಎಂದು ರಮೇಶ್‌ ಕಿಡಿಕಾರಿದ್ದಾರೆ.

ವಿಶ್ವಬ್ಯಾಂಕ್ ವರದಿಯ ವಿಶ್ಲೇಷಣೆಯಲ್ಲಿ ಮೋದಿ ಸರಕಾರವು ನಿರ್ಲಕ್ಷ್ಯ ವಹಿಸಿದ್ದು ಮಾತ್ರವಲ್ಲ, ಉದ್ದೇಶಪೂರ್ವಕ ಅಪ್ರಾಮಾಣಿಕತೆಯನ್ನೂ ಪ್ರದರ್ಶಿಸಿದೆ ಎಂದು ಅವರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News