×
Ad

75 ವರ್ಷಗಳ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂಬ ಭಾಗವತ್ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ನಿವೃತ್ತಿಗೆ ವಿಪಕ್ಷಗಳ ಆಗ್ರಹ

Update: 2025-07-11 12:50 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: 75 ವರ್ಷಗಳ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ನಿವೃತ್ತಿಗೆ ವಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಮೋದಿಯನ್ನು ʼಕಳಪೆ ಪ್ರಶಸ್ತಿ ವಿಜೇತ ಪ್ರಧಾನಿʼ ಎಂದು ವ್ಯಂಗ್ಯವಾಡಿದರು. 2025ರ ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷ ತುಂಬುವುದರಿಂದ ಆರೆಸ್ಸೆಸ್ ಮುಖ್ಯಸ್ಥರು ಮನೆಗೆ ಮರಳುವಂತೆ ನೆನಪಿಸಿದ್ದಾರೆ. ಪ್ರಧಾನ ಮಂತ್ರಿಗಳು ಕೂಡ ಆರೆಸ್ಸೆಸ್ ಮುಖ್ಯಸ್ಥರಿಗೆ 2025ರ ಸೆಪ್ಟೆಂಬರ್ 11ರಂದು ಅವರಿಗೂ 75 ವರ್ಷ ತುಂಬುತ್ತದೆ ಎಂದು ನೆನಪಿಸಬಹುದು ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಪವನ್ ಖೇರಾ ಈ ಕುರಿತು ಪ್ರತಿಕ್ರಿಯಿಸಿ, ʼಪ್ರಧಾನಿ ಮೋದಿ ಮತ್ತು ಭಾಗವತ್ ಇಬ್ಬರೂ ತಮ್ಮ ಬ್ಯಾಗ್‌ಗಳನ್ನು ಎತ್ತಿಕೊಂಡು ಕಚೇರಿಯಿಂದ ಹೊರಹೋಗಬೇಕು. ಈಗ ನೀವಿಬ್ಬರೂ ಬ್ಯಾಗ್ ಎತ್ತಿಕೊಂಡು ಹೋಗಿ ಪರಸ್ಪರ ಮಾರ್ಗದರ್ಶಕರಾಗಿʼ ಎಂದು ಹೇಳಿದರು.

ʼ75 ವರ್ಷ ತುಂಬಿದ ನಂತರ ಬಿಜೆಪಿಯ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲು ಬಳಸಲಾಗುತ್ತಿದ್ದ ನಿವೃತ್ತಿ ನಿಯಮವನ್ನು ಪ್ರಧಾನಿ ಮೋದಿ ತಮ್ಮ ಮೇಲೂ ಅನ್ವಯಿಸಿಕೊಳ್ಳುತ್ತಾರೆಯೇʼ ಎಂದು ಉದ್ಧವ್ ನೇತೃತ್ವದ ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಜಸ್ವಂತ್ ಸಿಂಗ್ ಅವರಂತಹ ನಾಯಕರಿಗೆ 75 ವರ್ಷ ತುಂಬಿದ ನಂತರ ನಿವೃತ್ತಿ ಹೊಂದುವಂತೆ ಪ್ರಧಾನಿ ಮೋದಿ ಒತ್ತಾಯಿಸಿದ್ದರು. ಅವರು ಈಗ ಅದೇ ನಿಯಮವನ್ನು ಸ್ವತಃ ಅನ್ವಯಿಸುತ್ತಾರೆಯೇ ಎಂದು ನೋಡೋಣ ಎಂದು ಸಂಜಯ್ ರಾವತ್ ಹೇಳಿದರು.

ಬುಧವಾರ ನಾಗ್ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, 75 ವರ್ಷಗಳ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News