×
Ad

ಇಡಿ ಬಿಜೆಪಿಯ ಕೈಗೊಂಬೆ, ವಿಶ್ವಾಸಾರ್ಹತೆ ಕಳೆದುಕೊಂಡಿದೆ: ರಣದೀಪ್ ಸುರ್ಜೆವಾಲಾ

Update: 2023-07-12 22:12 IST

ರಣದೀಪ್ ಸಿಂಗ್ ಸುರ್ಜೆವಾಲಾ | Photo: PTI

ಹೊಸದಿಲ್ಲಿ: ಅನುಷ್ಠಾನ ನಿರ್ದೇಶನಾಲಯವು ತನ್ನೆಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಹಾಗೂ ಅದು ಬಿಜೆಪಿಯ ‘‘ಕೈಗೊಂಬೆ’’ಯಾಗಿದೆ ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. ‘‘ಅದನ್ನು ಈಗ ಬಿಜೆಪಿಯು ತನ್ನ ವೈಯಕ್ತಿಕ ಜಗಳಗಳನ್ನು ಇತ್ಯರ್ಥಗೊಳಿಸಲು ಬಳಸಿಕೊಳ್ಳುತ್ತಿದೆ’’ ಎಂದು ಅವರು ನುಡಿದರು.

ಅನುಷ್ಠಾನ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾಗೆ 2021 ನವೆಂಬರ್ ಮತ್ತು 2022 ನವೆಂಬರ್ನಲ್ಲಿ ನೀಡಲಾಗಿರುವ ಸೇವಾವಧಿ ವಿಸ್ತರಣೆಗಳು ಕಾನೂನುಬಾಹಿರ ಎಂಬುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, 2021ರ ಸೇವಾಧಿ ವಿಸ್ತರಣೆ ಬಳಿಕ ಮಿಶ್ರಾ ತೆಗೆದುಕೊಂಡ ಕ್ರಮಗಳನ್ನು ‘‘ಅಕ್ರಮ ಮತ್ತು ಕಳಂಕಪೂರಿತ’’ ಎಂಬುದಾಗಿ ಪರಿಗಣಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

‘‘2021 ನವೆಂಬರ್ 17 ಮತ್ತು 2022 ನವೆಂಬರ್ 17ರಂದು ಅನುಷ್ಠಾನ ನಿರ್ದೇಶನಾಲಯದ ನಿರ್ದೇಶಕರಿಗೆ ಎರಡು ಅಕ್ರಮ ಸೇವಾವಧಿ ವಿಸ್ತರಣೆಗಳನ್ನು ನೀಡಿರುವ ರಾಜಕೀಯ ನಾಯಕರು ಮತ್ತು ಅಧಿಕಾರಿಗಳನ್ನು ಇದಕ್ಕೆ ಜವಾಬ್ದಾರಿಯಾಗಿಸುವುದು ಬೇಡವೇ? ಅದು ಸ್ವತಃ ಪ್ರಧಾನಿಯೇ ಆಗಿರಬಹುದು’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ಸುರ್ಜೆವಾಲಾ ಹೇಳಿದರು. ‘‘ರಾಜಕೀಯ ದ್ವೇಷ ಸಾಧನೆಗಾಗಿ ಮೋದಿ ಸರಕಾರವು ಅನುಷ್ಠಾನ ನಿರ್ದೇಶನಾಲಯವನ್ನು ಸಾರಾಸಗಟಾಗಿ ದುರುಪಯೋಗಪಡಿಸಿಕೊಂಡಿದೆ ಎಂಬ ನಮ್ಮ ನಿಲುವನ್ನು ಸುಪ್ರಿಂ ಕೋರ್ಟ್ ತೀರ್ಪು ದೃಢಪಡಿಸಿದೆ. ಸರಕಾರವು ಭಯ ಹರಡುವುದಕ್ಕಾಗಿ ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಆಯ್ದ ಉದ್ಯಮಿಗಳ ಮೇಲೆ ಅನುಷ್ಠಾನ ನಿರ್ದೇಶನಾಲಯವನ್ನು ಛೂಬಿಡುತ್ತಿದೆ ಎಂದು ಅವರು ಆರೋಪಿಸಿದರು.

ಸಂಜಯ್ ಕುಮಾರ್ ಮಿಶ್ರಾ ಅಧಿಕಾರಾವಧಿಯಲ್ಲಿ ಅನುಷ್ಠಾನ ನಿರ್ದೇಶನಾಲಯವು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕ ಅಭಿಶೇಕ್ ಬ್ಯಾನರ್ಜಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕರಾದ ಶರದ್ ಪವಾರ್, ಅಜಿತ್ ಪವಾರ್, ಅನಿಲ್ ದೇಶ್ಮುಖ್ ಮತ್ತು ನವಾಬ್ ಮಲಿಕ್, ನ್ಯಾಶನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಸೇರಿದಂತೆ ಹಲವು ರಾಜಕೀಯ ನಾಯಕರ ವಿರುದ್ಧ ತನಿಖೆ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News